ಉಡುಪಿ, ಆ 14: ಆಳ ಸಮುದ್ರ ಮೀನುಗಾರಿಕೆ ಮುಗಿಸಿ ಬರುತ್ತಿದ್ದ ಎರಡು ಬೋಟುಗಳ ಇಂಜಿನ್ ಹಾಳಾಗಿ ಸಮುದ್ರದಲ್ಲೇ ಸಿಲುಕಿಕೊಂಡಿದ್ದು ಇದರಲ್ಲಿದ್ದ 15ರಿಂದ 18 ಮೀನುಗಾರರು ಅಪಾಯಕ್ಕೆ ಸಿಲುಕಿದ್ದಾರೆ. ಮಲ್ಪೆಯ ಆಳ ಸಮುದ್ರ ಮೀನುಗಾರಿಕೆಯ ವಿಶ್ವಾಸ್ ಮತ್ತು ಜನಾರ್ದನ್ ಎಂಬ ಬೋಟುಗಳು ಅಪಾಯಕ್ಕೆ ಸಿಲುಕಿದ್ದು, ಒಂದು ಬೋಟು ಕಾಪು ಹಾಗೂ ಇನ್ನೊಂದು ಬೋಟು ಭಟ್ಕಳ ಸಮುದ್ರ ವ್ಯಾಪ್ತಿಯಲ್ಲಿ ಇಂಜಿನ್ ಕೆಟ್ಟು ನಿಂತಿದೆ. ಬೋಟ್ ನಲ್ಲಿರುವ ಮೀನುಗಾರರು ವಯರ್ ಲೆಸ್ ಮೂಲಕ ಮಲ್ಪೆ ಕಂಟ್ರೋಲ್ ರೂಂ ಸಂಪರ್ಕಿಸಿ ಸಹಾಯಯಾಚಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಎರಡು ಬೋಟುಗಳಲ್ಲಿ 15 ರಿಂದ 18 ಮೀನುಗಾರರು ಇರಬಹುದು. ಬೋಟ್ ಮತ್ತು ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲು ಕರಾವಳಿ ಕಾವಲು ಪಡೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಕೋಸ್ಟ್ ಗಾರ್ಡ್ ಪ್ರಧಾನ ಕಚೇರಿಗೆ ಮಾಹಿತಿ ರವಾನಿಸಿದ್ದು, ಕೋಸ್ಟ್ ಗಾರ್ಡ್ ತುರ್ತು ಕಾರ್ಯಾಚರಣೆ ಕೈಗೊಳ್ಳಲಿದೆ.