ಸುಬ್ರಹ್ಮಣ್ಯ, ಆ 14 : ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಬಿರುಸಿನ ಮಳೆಯಿಂದ ಖುದ್ದು ತೊಂದರೆಯನ್ನು ಅನುಭವಿಸಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ. ಮಳೆಯಿಂದಾಗಿ ಹಾಸನ ಸಕಲೇಶಪುರ ಶಿರಾಡಿ ಮಾರ್ಗವಾಗಿ ಧರ್ಮಸ್ಥಳಕ್ಕೆ ಆಗಮಿಸಬೇಕಾಗಿದ್ದ ಸಿಎಂ ಸೋಮವಾರ , ಹಾಸನದಿಂದ ಬೇಲೂರು, ಮೂಡಿಗೆರೆ ಕೊಟ್ಟಿಗೆ ಹಾರ ಮೂಲಕ ಚಾರ್ಮಾಡಿ ಘಾಟಿಯಾಗಿ ಆಗಮಿಸಿದ್ದರು. ಮಂಗಳವಾರ ಬೆಳಗ್ಗೆ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾರ್ಗ ಬದಲಿಸಿ ತೆರಳಬೇಕಾಯಿತು. ಧರ್ಮಸ್ಥಳದಲ್ಲಿ ತಂಗಿದ್ದ ಸಿಎಂ ಕುಟುಂಬ ಬೆಳಗ್ಗೆ ಸುಬ್ರಹ್ಮಣ್ಯಕ್ಕೆ ಉಪ್ಪಿನಂಗಡಿ ಮೂಲಕ ತೆರಳಬೇಕಿತ್ತು. ಆದರೆ ಕಡಬದ ಹೊಸ ಮಠ ಸೇತುವೆ ಸಂಪೂರ್ಣ ಮುಳುಗಡೆಯಾದ ಹಿನ್ನಲೆಯಲ್ಲಿ ಸುತ್ತಿ ಬಳಸಿ ಸುಬ್ರಮಣ್ಯಕ್ಕೆ ತೆರಳಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು.
ಪುತ್ತೂರಿಗೆ ತೆರಳಿ ಜಾಲ್ಸೂರು, ಗುತ್ತಿಗಾರು ಮೂಲಕ ಸುಬ್ರಹ್ಮಣ್ಯಕ್ಕೆ ತೆರಳಬೇಕಾಯಿತು. ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜಿಸಿ ಮುಖ್ಯಮಂತ್ರಿಗಳಿದ್ದ ಕಾರು ಸುಗಮವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು. ಕುಕ್ಕೆ ಸುಬ್ರಮಣ್ಯದಲ್ಲೂ ಸಿಎಂ ಭೇಟಿ ನಿಮಿತ್ತ ವಿಶೇಷ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸಿಎಂ ಎಚ್ಡಿಕೆಹಾಗೂ ಕುಟುಂಬಸ್ಥರು ನಾಗರ ಪಂಚಮಿಯ ಮುನ್ನಾದಿನ ತುಲಾಭಾರ , ಆಶ್ಲೇಷ ಬಲಿ , ಪಂಚಾಭಿಷೇಕ ಸೇವೆ ಸಲ್ಲಿಸಲಿದ್ದಾರೆ.