ಕುಂದಾಪುರ, ಆ 14: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕುಂದಾಪುರ ಸಮೀಪದ ಕಮಲಶಿಲೆ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಒಳಗೆ ನೀರು ಹರಿದುಬಂದಿದೆ. ದೇವಿಗೆ ಜಲಾವೃತ ಆಗುತ್ತಿದ್ದಂತೆ ಪುರೋಹಿತರು ಆರತಿ ಬೆಳಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆಗಸ್ಟ್ 13 ರ ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಕುಬ್ಜಾ ನದಿ ಮೈ ದುಂಬಿ ಹರಿಯುತ್ತಿದ್ದು, ಪರಿಣಾಮ ಕಮಲಶಿಲೆ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ನೀರು ಹರಿದು ಬಂದಿದೆ.
ವಾಡಿಕೆಯಂತೆ ಗರ್ಭಗುಡಿಗೆ ಬಂದ ನೀರು ಹರಿದು ಬಂದಿದ್ದು, ಇಲ್ಲಿ ವರ್ಷಕ್ಕೊಮ್ಮೆ ದೇವಿಗೆ ನೈಸರ್ಗಿಕ ನದಿ ನೀರಿನ ಅಭಿಷೇಕ ಸಾಮಾನ್ಯ. ನದಿ ನೀರು ಬಂದ ಹಿನ್ನಲೆಯಲ್ಲಿ ಭಕ್ತರು ಪುಳಕಗೊಂಡಿದ್ದು, ಹೀಗಾಗಿ ಸುತ್ತಲೂ ಜಲಾವೃತವಾಗಿ ನೀರಿನ ಮಧ್ಯೆ ಕುಳಿತಿರುವ ದೇವಿಯನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ಆಗಮಿಸುತ್ತಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಿಂದ 35km ಮುಂದೆ ಸುಂದರವಾದ ಹಚ್ಚಹಸಿರಿನ ಕಾಡಿನ ಮಧ್ಯಭಾಗದಲ್ಲಿರುವ ಕಮಲಶಿಲೆ ಇದೆ. ಅರಣ್ಯದ ತಪ್ಪಲಿನಲ್ಲಿ ಪವಿತ್ರವಾದ ಕುಬ್ಜ ನದಿಯು ಹರಿಯುತ್ತಿದ್ದು .ಇದರ ತಟದಲ್ಲಿ ಪ್ರಾಚೀನ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವಿದೆ.