ಸುರತ್ಕಲ್, ಆ 14: ಮಾನವ ಪರ ಮೌಲ್ಯಗಳನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಸ್ವಾತಂತ್ರ್ಯದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಹಾಗೂ ನಾವೆಲ್ಲರೂ ಮೊದಲು ಭಾರತೀಯರು ಎಂಬ ಕಲ್ಪನೆಯೊಂದಿಗೆ ಸಂಭ್ರಮಿಸುವ ಉದ್ದೇಶದಿಂದ ವಿಶ್ವಕರ್ಮ ಯುವ ಮಿಲನ್ ಸಂಸ್ಥೆ ಆಗಸ್ಟ್ 12 ರ ಭಾನುವಾರ ಸುರತ್ಕಲ್ ಆಶಾಕಿರಣ ರೆಸಿಡೆನ್ಷಿಯಲ್ ಗೆ ಭೇಟಿ ನೀಡಿತು. ಅಲ್ಲಿರುವ ಎಚ್ಐವಿ ಪೀಡಿತ ಮಕ್ಕಳಿಗೆ ಅಗತ್ಯವಿರುವ ಗೃಹೋಪಯೋಗಿ ವಸ್ತುಗಳನ್ನು ನೀಡಿ ಅವರೊಂದಿಗೆ ಸಂಘದ ಕಾರ್ಯಕರ್ತರು ವಿಶೇಷ ಮಕ್ಕಳೊಂದಿಗೆ ಕಾಲ ಕಳೆದು ಭೋಜನ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಸುರತ್ಕಲ್ ಆಶಾಕಿರಣ ರೆಸಿಡೆನ್ಷಿಯಲ್ ನಿರ್ದೇಶಕಿ ಪುಷ್ಪಾ, ಎಚ್.ಐ.ವಿ ಪೀಡಿತ ಮಕ್ಕಳನ್ನು ಸಮಾಜದಿಂದ ದೂರ ಮಾಡುವುದು ಸರಿಯಲ್ಲ. ಎಲ್ಲರೂ ಅಂತಹ ಮಕ್ಕಳೊಂದಿಗೆ ಭಯ ಪಡದೆ ಬೆರೆತರೆ, ತಂದೆ ತಾಯಿಯರಿಂದ ಕಳೆದ ಪ್ರೀತಿಯನ್ನು ಕೊಂಚ ಮಟ್ಟಿಗಾದರೂ ಕೊಡುವ ಪ್ರಯತ್ನ ಮಾಡಬಹುದು. ಎಚ್.ಐ.ವಿ. ಸೋಂಕಿನ ಬಗ್ಗೆ ಸರಿಯಾದ ಮಾಹಿತಿ ಇದ್ದಾಗ ಮಾತ್ರ ಇಂತಹ ಮಕ್ಕಳ ಬೆಳವಣಿಗೆ ಸಾಧ್ಯ . ಈ ಮಕ್ಕಳಲ್ಲಿ ಅಧ್ಬುತ ಪ್ರತಿಭೆಗಳಿದೆ. ಎಲ್ಲರನ್ನೂ ನಾಚಿಸುವಂತೆ ನೃತ್ಯ ಮಾಡುತ್ತಾರೆ. ಕೋಗಿಲೆಯ ಕಂಠದ ಹಾಡುಗಾರರು ಇದ್ದಾರೆ. ಅದರೆ ಆ ಪ್ರತಿಭೆಗಳನ್ನು ಗುರುತಿಸುವ ಪ್ರಯತ್ನವಾಗಬೇಕು ಎಂದರು.