ಮಡಿಕೇರಿ, ಆ 14: ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಡಿಕೇರಿ ಫಾಟಿಯ ಮದೆನಾಡು, ಜೋಡುಪಾಲ ಮತ್ತು ಶಿರಾಡಿಫಾಟಿಯಲ್ಲಿ ಗುಡ್ಡ ಕುಸಿದಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಹೆದ್ದಾರಿ ಮಧ್ಯೆ ಸಿಕ್ಕಿಕೊಂಡಿರುವ ಪ್ರಯಾಣಿಕರು ಯಾವುದೇ ಕಡೆಗೆ ತೆರಳಲಾಗದೆ ಅತಂತ್ರರಾಗಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಡಿಕೇರಿ ಬಳಿಯ ಮದೆನಾಡುನಲ್ಲಿ ಅ. 13 ರಂದು ಬೆಳಿಗ್ಗೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿತ್ತು. ಬೃಹತ್ ಜೆಸಿಬಿ ಯಂತ್ರಗಳ ಸಹಾಯದಿಂದ ಹೆದ್ದಾರಿಗೆ ಬಿದ್ದ ಮಣ್ಣನ್ನು ತೆರವುಗೊಳಿಸಲು ಕಳೆದ ಎರಡು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಕೂಡ ಮಣ್ಣನ್ನು ತೆಗೆಯುವ ಕಾರ್ಯಚರಣೆ ನಡೆದಿದೆ. ಪರಿಣಾಮ ಮಂಗಳೂರು, ಮೈಸೂರು, ಬೆಂಗಳೂರು ಸಂಚಾರ ಸಂಪೂರ್ಣ ಬಂದ್ ಆಗಿದೆ. ಇನ್ನು ಇಂದು ಜೋಡುಪಾಲ ಬಳಿ ಗುಡ್ಡ ಕುಸಿದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಮಡಿಕೇರಿ ಬಳಿಯ ಮದೆನಾಡು ಮತ್ತು ಜೋಡುಪಾಲದಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆ ಸಂಪರ್ಕ ಕಳೆದ ಎರಡು ದಿನದಿಂದ ಸಂಪೂರ್ಣ ಬಂದ್ ಆಗಿತ್ತು. ಮೈಸೂರು - ಬೆಂಗಳೂರಿಗೆ ಪ್ರಯಾಣಿಸುವ ವಾಹನಗಳು ಸುಬ್ರಹ್ಮಣ್ಯ ಮೂಲಕ ಸಕಲೇಶಪುರವಾಗಿ ಮತ್ತು ಪಾನತ್ತೂರು - ಭಾಗಮಂಡಲ ಮೂಲಕ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿಘಾಟ್ನ ಸಕಲೇಶಪುರದ ಬಳಿ ಗುಡ್ಡ ಕುಸಿತಗೊಂಡಿದೆ. ಇದರಿಂದ ಗುಡ್ಡದ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದು ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ತೆರವು ಕಾರ್ಯಾಚರಣೆ ಮುಂದುವರೆದಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇದೆ.