ಮಂಗಳೂರು, ಆ 14: ವಾಡಿಕೆ ಮಳೆಗಿಂತ ಈ ಬಾರಿ ೧೨೮ ಶೇಕಡಾ ಹೆಚ್ಚುವರಿ ಮಳೆಯಾಗಿದೆ. ಹೀಗಾಗಿ ಮುಂದಿನ ೨೪ ಗಂಟೆಗಳ ಕಾಲ ಮುನ್ನೆಚ್ಚರಿಕೆ ವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಜೀವಹಾನಿ, 11 ಜಾನುವಾರುಗಳು ಸಾವನ್ನಪ್ಪಿದೆ. ಇನ್ನು ಜಿಲ್ಲೆಯಾದ್ಯಂತ 1292 ಮನೆಗಳಿಗೆ ಹಾನಿಯಾಗಿದೆ. ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 8.6, ಪುತ್ತೂರಿನಲ್ಲಿ 2.5 ಮತ್ತು ಉಪ್ಪಿನಂಗಡಿಯಲ್ಲಿ 29.6 ಮೀಟರ್ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಮುಂದಿನ 24 ಗಂಟೆಗಳ ಕಾಲ ಮುನ್ನಚ್ಚರಿಕೆ ವಹಿಸುವಂತೆ ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ 24 ಗಂಟೆ ಕಂಟ್ರೋಲ್ ರೂಂ ವ್ಯವಸ್ಥೆ ಮಾಡಲಾಗಿದೆ ಎಂದರು. ಇನ್ನು ನದಿ ಸಂಗಮದಲ್ಲಿ ನೀರಿನ ಮಟ್ಟ ವೀಕ್ಷಣೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಪ್ರಮುಖವಾಗಿ ನಾಳೆ ಬೆಳಿಗ್ಗೆ ಕೂಡಾ ಮಳೆ ಹೆಚ್ಚಿದ್ದರೆ ಶಾಲಾ ಕಾಲೇಜಿಗೆ ಮಕ್ಕಳು ತೆರಳದಂತೆ ಪೋಷಕರೇ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಈ ಬಾರೀ ಮಳೆಯ ನೆಪದಲ್ಲಿ ಹಲವು ರಜೆಗಳನ್ನು ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಮಾತ್ರವೇ ಭಾರೀ ಮಳೆ ಸಂದರ್ಭ ಅಪಾಯ ಎದುರಾಗುತ್ತದೆ. ನಗರ ಭಾಗಗಳಲ್ಲಿ ಅಷ್ಟರ ಮಟ್ಟಿಗೆ ಅಪಾಯ ಎದುರಾಗುವುದಿಲ್ಲ. ಒಂದು ವೇಳೆ ಮಳೆ ಪ್ರಮಾಣ ಹೆಚ್ಚಿದ್ದಲ್ಲಿ ಪೋಷಕರೇ ಎಚ್ಚರ ವಹಿಸಬೇಕು.
ಇನ್ನು ಶಾಲಾ ಆಡಳಿತ ಮಂಡಳಿ ಕೂಡ ವಿದ್ಯಾರ್ಥಿಗಳಿಗೆ ಧಾರಾಕಾರ ಮಳೆ ಸಂದರ್ಭ ಶಾಲೆಗಳಿಗೆ ತೆರಳಬೇಕೆಂದು ಒತ್ತಾಯಪಡಿಸಬಾರದು” ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.