ಶಿರಾಡಿ, ಆ 14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಶಿರಾಡಿಘಾಟ್ ನಲ್ಲಿ ಗುಡ್ಡ ಕುಸಿದು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಮಂಗಳೂರು ಬೆಂಗಳೂರು ಸಂಪರ್ಕ ರಸ್ತೆಯಾದ ಶಿರಾಡಿಯಲ್ಲಿ ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತಿವೆ. ಈಗಾಗಲೇ ಶಿರಾಡಿಯಲ್ಲಿ ಹಲವು ಕಡೆಗಳಲ್ಲಿ ಕುಸಿತ ಉಂಟಾಗಿದ್ದು, ಕೆ ಎಸ್ ಆರ್ ಟಿಸಿ ಬಸ್ ಗಳು ಸೇರಿದಂತೆ ಹಲವು ವಾಹನಗಳು ಸಾಲುಗಟ್ಟಿ ನಿಂತಿವೆ.
ಈ ನಡುವೆ ಕೆಲವೊಂದು ಬಸ್ಸುಗಳ ಮೇಲೆ ಗುಡ್ಡ ಹಾಗೂ ಮರಗಳು ಬಿದ್ದು ಹಾನಿ ಸಂಭವಿಸಿದೆ. ದಿನವಿಡಿ ಬಸ್ ಗಳು ಬ್ಲಾಕ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಪರಿಣಾಮ ಮಹಿಳೆಯರು ಹಾಗೂ ಮಕ್ಕಳು ಪರದಾಡುವಂಟಾಗಿದೆ. ಇನ್ನು ಶಿರಾಡಿ ಘಾಟ್ ನಲ್ಲಿ ಸಂಚಾರ ವ್ಯತ್ಯಯ ಹಿನ್ನೆಲೆ ಇದೀಗ ವಾಹನಗಳು ಚಾರ್ಮಾಡಿ ಮೂಲಕ ಬೆಂಗಳೂರಿನತ್ತ ಹೊರಟಿವೆ. ಚಾರ್ಮಾಡಿ ಘಾಟಿಯಲ್ಲಿ ಬದಲಿ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದರಿಂದ ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಗೆ ಚಾರ್ಮಾಡಿ ಘಾಟ್ ನಲ್ಲಿ ಭೂಕುಸಿತದ ಭೀತಿ ಉಂಟಾಗಿದ್ದು ಸ್ಥಳೀಯರು, ಪೊಲೀಸರು, ಸಮಾಜ ಸೇವಕ ಧರ್ಮಸ್ಥಳ ಹಕೀಮ್ ಮತ್ತು ತಂಡ ಸಂಚಾರ ಸುಗಮಗೊಳಿಸುತ್ತಿದ್ದಾರೆ. ಇನ್ನು ಬೆಂಗಳೂರು ಮಂಗಳೂರು ಸಂಪರ್ಕಿಸುವ ಈ ಎರಡೂ ರಸ್ತೆಗಳಲ್ಲಿ ಭೂಕುಸಿತ, ಗುಡ್ಡೆ ಕುಸಿತದಂತಹ ಘಟನೆಗಳು ಮುಂದುವರೆಯುವ ಸಾಧ್ಯತೆ ಇದೆ.