ಮಂಗಳೂರು, ಆ 15: ರಾಜ್ಯಾದ್ಯಂತ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿ ಆಚರಣೆ ಆಗಸ್ಟ್ 15 ರ ಬುಧವಾರ ಜರುಗಿತು. ಮಂಗಳೂರಿನ ಶ್ರೀಮಂಗಳಾದೇವಿ, ಶ್ರೀಶರವು ಮಹಾಗಣಪತಿ ದೇವಸ್ಥಾನ ಸಹಿತ ನಾನಾ ಕ್ಷೇತ್ರದಲ್ಲಿ ನಾಗರಪಂಚಮಿ ಆಚರಿಸಲಾಯಿತು. ಮಂಗಳೂರಿನ ಪ್ರಮುಖ ನಾಗರಾಧನ ಕ್ಷೇತ್ರವಾದ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ದೇವಾಲಯದ ನಾಗಬನದಲ್ಲಿ ಹಾಲು, ಬೊಂಡ ಅಭಿಷೇಕ, ಸೀಯಾಳಾಭಿಷೇಕ, ನಾಗತಂಬಿಲ, ಪಂಚಾಮೃತ ಅಭಿಷೇಕಗಳು ನಡೆದವು.
ವಿವಿಧ ಕ್ಷೇತ್ರದ ನಾಗಸನ್ನಿಧಿಗಳಲ್ಲಿ ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ತಂಬಿಲ, ಸೀಯಾಳಾಭಿಷೇಕ ನೆರವೇರಿತು. ಬಹುತೇಕ ಕ್ಷೇತ್ರಗಳಲ್ಲಿ ಮತ್ತು ನಾಗಸನ್ನಿಧಿಗಳಲ್ಲಿ ಮಧ್ಯಾಹ್ನ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ನಡೆಯಲಿದೆ. ಇನ್ನೊಂದೆಡೆ ನಾನಾ ಕುಟುಂಬದ ಮೂಲಸ್ಥಾನ ಹಾಗೂ ಸಂಬಂಧಿತ ನಾಗಬನಗಳಲ್ಲಿ ತನು ಎರೆದು ನಾಗತಂಬಿಲ ಸೇವೆ ಸಲ್ಲಿಸುವ ಮೂಲಕ ಭಕ್ತರು ನಾಗರಪಂಚಮಿ ಆಚರಿಸಿದರು. ನಾಗನಕಲ್ಲುಗಳಿಗೆ ಹಾಲು, ಎಳನೀರು ಸಹಿತ ಪಂಚಾಮೃತ ಅಭಿಷೇಕ ವೈದಿಕ ವಿಧಿವಿಧಾನದಲ್ಲಿ ನಾನಾ ಕಡೆ ನಡೆಯಿತು.