ಮಂಗಳೂರು, ಆ 15: 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದ.ಕ. ಜಿಲ್ಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಕರಾವಳಿಯಲ್ಲಿ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ನಗರದ ನೆಹರೂ ಮೈದಾನದಲ್ಲಿ ಇಂದು ಸರಳ ರೀತಿಯಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ಬಳಿಕ ಪೆರೇಡ್ ವೀಕ್ಷಣೆ ಮಾಡಿದರು.
ಆ ಬಳಿಕ ಮಾತನಾಡಿದ ಸಚಿವರು, ಸ್ವಾತಂತ್ರ ಹೋರಾಟಗಾರರು ಹಾಕಿಕೊಟ್ಟ ಜಾತ್ಯತೀತ ದಾರಿಯಲ್ಲಿ ನಾವು ಮುನ್ನಡೆಯಬೇಕಾಗಿದೆ. ಜಿಲ್ಲೆಯ ಜನರು ಪ್ರೀತಿ, ವಿಶ್ವಾಸ, ಸೌಹಾರ್ದದ ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಆಗ ಮಾತ್ರ ಸ್ವಾತಂತ್ರೋತ್ಸವ ಆಚರಣೆಗೆ ಮಹತ್ವ ಬರಲಿದೆ ಎಂದು ಸಚಿವರು ಹೇಳಿದರು. ಕಾರ್ನಾಡ್ ಸದಾಶಿವ ರಾಯರ ಜೀವನ ವೃತ್ತಾಂತವನ್ನು ಚುಟುಕಾಗಿ ವಿವರಿಸುತ್ತಾ, ಸ್ವಾತಂತ್ರ ಹೋರಾಟದಲ್ಲಿ ಅವರ ಪಾತ್ರವನ್ನು ವಿವರಿಸಿದರು. 1881 ರಲ್ಲಿ ಅತ್ಯಂತ ಶ್ರೀಮಂತ ವಕೀಲನಾಗಿದ್ದ ರಾಮಚಂದ್ರರ ಏಕೈಕ ಪುತ್ರನಾಗಿದ್ದ ಕಾರ್ನಾಡ್ ಸದಾಶಿವರಾಯರು ಬಯಸಿದ್ದರೆ ಐಷಾರಾಮದ ಬದುಕನ್ನು ಹಾಯಾಗಿ ಕಳೆಯಬಹುದಾಗಿತ್ತು. 1919ರಲ್ಲಿ ಮಹಾತ್ನಗಾಂಧಿವರು ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿದಾಗ ಹೋರಾಟದ ರಂಗಕ್ಕೆ ಮೊದಲು ಧುಮುಕಿದವರು . 1923 ರಲ್ಲಿ ಒಂದೇ ವರ್ಷದಲ್ಲಿ ತನ್ನ ಮಗಳ, ಮಗ, ಪತ್ನಿಯನ್ನು ಕಳೆದುಕೊಂಡು ಮಾನಸಿಕವಾಗಿ ಜರ್ಜರಿತವಾಗಿ ಶಾಂತಿಯನ್ನು ಅರಸುತ್ತಾ ಸಬರಮತಿ ಆಶ್ರಮ ಸೇರುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಬಂದು ಇಡೀ ಜಿಲ್ಲೆ ಸಂಕಷ್ಟಕ್ಕೆ ಒಳಗಾದಗ ವಿಷಯವನ್ನರಿತು ಇಲ್ಲಿಗೆ ದಾವಿಸಿ ತನ್ನ ಎಲ್ಲಾ ಆಸ್ತಿ ಸಂಪತ್ತು ಜಿಲ್ಲೆಯ ಪುನರ್ ನಿರ್ಮಾಣಕ್ಕೆ ಧಾರೆ ಎರೆದರು.
ರಾಷ್ಟ್ರ ಧ್ವಜಾರೋಹಣದ ಬಳಿಕ ಪೆರೇಡ್ ಕಮಾಂಡರ್ ವಿಠಲ್ ಶಿಂಧೆ ಮುಂದಾಳತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಪೆರೇಡ್ ನಲ್ಲಿ 19 ವಿವಿಧ ತುಕಡಿಗಳು ಭಾಗವಹಿಸಿದ್ದವು. ಅತ್ಯುತ್ತಮವಾಗಿ ಪಥ ಸಂಚಲನ ನಿರ್ವಹಿಸಿದ ಎನ್ಸಿಸಿ ಏರ್ವಿಂಗ್ ಸೀನಿಯರ್ ಪ್ರಥಮ ಹಾಗೂ ಎನ್ಸಿಸಿ ನೇವಲ್ ಸೀನಿಯರ್ ತಂಡವು ದ್ವಿತೀಯ ಸ್ಥಾನದೊಂದಿಗೆ ರೋಲಿಂಗ್ ಸೀಲ್ಡ್ ಪಡೆದುಕೊಂಡವು.
ಸಮಾರಂಭದಲ್ಲಿ ಮಂಗಳೂರು ಬಿಷಪ್ ಡಾ. ರೆ.ಅಲೋಶಿಯಸ್ ಪಾವ್ಲ್ ಡಿಸೋಜ, ಸಂಸದ ನಳಿನ್ ಕುಮಾರ್ ಕಟೀಲು, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಭಾಸ್ಕರ ಕೆ., ಉಪ ಮೇಯರ್ ಮುಹಮ್ಮದ್, ಮಾಜಿ ಶಾಸಕ ಯೋಗೀಶ್ ಭಟ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಬಿ.ಎಂ.ಫಾರೂಕ್, ಜಿಪಂ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಅಪರ ಜಿಲ್ಲಾಧಿಕಾರಿ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.ಮಳೆಯ ಹಿನ್ನೆಲೆಯಲ್ಲಿ ನೆಹರೂ ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು.