ಉಡುಪಿ,ಆ 15 : ಅನಾರೋಗ್ಯದಿಂದ ಬಳಲುತ್ತಿದ್ದ ದಲಿತ ಸಮುದಾಯದ ಬಡ ವ್ಯಕ್ತಿಯೊಬ್ಬ ಸೂಕ್ತ ಚಿಕಿತ್ಸೆ ದೊರಕದೆ ಮೃತಪಟ್ಟ ಘಟನೆ ಆಗಸ್ಟ್, ೧೪ರ ಉಡುಪಿಯ ಪೆರಂಪಳ್ಳಿ ಗೇರುಕಟ್ಟೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಾಸ್ಕರ್ (36) ಎಂದು ಗುರುತಿಸಲಾಗಿದೆ.
ಮೇಸ್ತ್ರಿ ಕೆಲಸ ಮಾಡುತ್ತಿದ್ದ ಬಾಸ್ಕರ್ ಅವರಿಗೆ ಅನಾರೋಗ್ಯ ಕಾಡತೊಡಗಿದ್ದು, ಹೀಗಾಗಿ ಅಜ್ಜರಕಾಡಿನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಆಗಸ್ಟ್ 13ರ ಮಂಗಳವಾರ ದಾಖಲಾಗಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿಗಳು ಬಾಸ್ಕರ್ ಅವರಿಗೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗುವಂತೆ ಸೂಚಿಸಿದರು. ಅದರಂತೆ ವೆನ್ಲಾಕ್ ಆಸ್ಪತ್ರೆಗೆ ತೆರಳಿದಾಗ ಬಾಸ್ಕರ್ ಅವರಿಗೆ ತೀವ್ರ ನಿಗಾ ಘಟಕ ( ಐಸಿಯು) ದಲ್ಲಿ ದಾಖಲಿಸಿಲು ಜಾಗವಿಲ್ಲ ಎಂದು ಕೈಬಿಟ್ಟಿದ್ದಾರೆ. ಇನ್ನು ಕಡು ಬಡತನದಿಂದ ಬಳಲುತ್ತಿರುವ ಅವರನ್ನು ಹಣವಿಲ್ಲದೆ ಖಾಸಗಿ ಆಸ್ಪತ್ರೆಯಲ್ಲೂ ದಾಖಲಿಸಲಾಗದೆ ಅಜ್ಜರಕಾಡಿಗೆ ಹಿಂತಿರುವಾಗ ದಾರಿ ಮಧ್ಯೆಯಲ್ಲಿ ಬಾಸ್ಕರ್ ಅಸು ನೀಗಿದ್ದಾರೆ.
ಬಾಸ್ಕರ್ ಅವರ ಸಹೋದರ ಹರೀಶ್ ಕೂಡಾ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ಪೆರಂಪಳ್ಳಿಯ ಗೇರುಕಟ್ಟೆಯಲ್ಲಿ 20 ಕ್ಕೂ ಹೆಚ್ಚು ಬಡ ದಲಿತ ಕುಟುಂಬಗಳು ವಾಸಿಸುತ್ತಿದ್ದು, ಈ ಕುಟುಂಬಗಳು ವಾಸಕ್ಕೆ ಸಂಬಂಧಪಟ್ಟ ಸರಿಯಾದ ದಾಖಲೆ ಪತ್ರಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಬಾಸ್ಕರ್ ಸಾವಿಗೆ ಸೂಕ್ತ ವ್ಯವಸ್ಥೆ ಇಲ್ಲದ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬಡವರಾದ ಕಾರಣ ಯಾರೊಬ್ಬರು ಸಹಾಯಕ್ಕೆ ಧಾವಿಸಿಲ್ಲ ಎಂದು ಆರೋಪಿಸಿದ್ದಾರೆ. ಇದಲ್ಲದೆ ವೆನ್ಲಾಕ್ ಆಸ್ಪತ್ರೆಯಲ್ಲಿಯೂ ಅಂಬ್ಯುಲೆನ್ಸ್ ಇಲ್ಲದ ಕಾರಣ ಖಾಸಗಿ ಅಂಬ್ಯುಲೆನ್ಸ್ ನಲ್ಲಿ ಬಾಸ್ಕರ್ ಕರೆದೊಯ್ಯಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಘಟನೆಯ ಬಗ್ಗೆ ಸಹಾಯಕ ಉಪ ಆಯುಕ್ತರು ಸ್ಥಳೀಯರು ದೂರು ಸಲ್ಲಿಸಿದ್ದಾರೆ.