ಮಂಗಳೂರು, ಆ 15: ಆಷಾಡ ಕಳೆದು ಶ್ರಾವಣ ಬಂದಿದೆ. ಶ್ರಾಣಮಾಸದ ಮೊದಲ ಹಬ್ಬವಾಗಿ ನಾಗರ ಪಂಚಮಿಯನ್ನ ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇನ್ನೂ ತುಳುನಾಡಿನಲ್ಲಿ ಈ ಮೊದಲ ಹಬ್ಬ ನಾಗರಪಂಚಮಿಯನ್ನ ತುಸು ಹೆಚ್ಚಿಗೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರಾವಳಿಯ ವಿವಿಧ ನಾಗನ ಸನ್ನಿಧಿಗಳಲ್ಲಿ ಲಕ್ಷಾಂತರ ಭಕ್ತರು ಹಾಲು , ಎಳನೀರು ಅರ್ಪಿಸಿ ನಾಗನಿಗೆ ಪೂಜೆ ಸಲ್ಲಿಸಿದರು.
ಇನ್ನು 2100 ವರ್ಷಗಳ ಇತಿಹಾಸವಿರುವ , ತುಳುನಾಡಿನಲ್ಲಿ ಆಳುತ್ತಿದ್ದ ಜೋಗಿ ಅರಸರಿಂದ ಪೂಜಿಸಲ್ಪಟ್ಟಿದ್ದ, ಪಾವೂರು ಭಂಡಾರ ಮನೆ ತರವಾಡುವಿನಲ್ಲೂ ವಿಜೃಂಭಣೆಯಿಂದ ನಾಗರ ಪಂಚಮಿ ಆಚರಿಸಲಾಯಿತು. ಸುಮಾರು 1500ಕ್ಕೂ ಹೆಚ್ಚು ಭಕ್ತಾಧಿಗಳು ಪಾವೂರು ಭಂಡಾರ ಮನೆಗೆ ಆಗಮಿಸಿ ನಾಗನಿಗೆ ತನು ಎರೆದು ನಾಗತಂಬಿಲ ಸೇವೆ ಸಲ್ಲಿಸುವ ಮೂಲಕ ನಾಗರಪಂಚಮಿ ಆಚರಿಸಿದರು.
ಈ ವರ್ಷ ವಿಶೇಷವಾಗಿ , ನೀಲೇಶ್ವರ ಪದ್ಮನಾಭ ಉಚ್ಚಿಲತ್ತಾಯರ ಪುರೋಹಿತ ಮುಂದಾಳ್ವದಲ್ಲಿ ಕ್ಷೇತ್ರದಲ್ಲಿ ಅರಾಧಿಸಿಕೊಂಡು ಬರುವ ನಾಗ ಬ್ರಹ್ಮನಿಗೆ ವಿಶೇಷ ಆರಾಧನೆ, ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಪಾವೂರು ಭಂಡಾರ ಮನೆ ಸಮಿತಿಯ ಅಧ್ಯಕ್ಷ ಉಗ್ಗಪ್ಪ ಪೂಜಾರಿ, ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಭಿಮಾನಿಗಳು ಸೇರಿದ್ದರು.