ಕಾಸರಗೋಡು, ಆ 15: ಭಾರೀ ಮಳೆಯಿಂದ ಕಾಸರಗೋಡಿನ ಚಂದ್ರಗಿರಿ ಹೊಳೆ ಉಕ್ಕಿ ಹರಿಯುತ್ತಿದೆ. ಹೊಳೆಯಲಿ ಹರಿವು ಹೆಚ್ಚಾಗಿ ಪ್ರವಾಹ ಉಂಟಾದ ಹಿನ್ನಲೆಯಲ್ಲಿ 25 ರಷ್ಟು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕೊರಕ್ಕೋಡು ಪರಿಸರದ ತಗ್ಗು ಪ್ರದೇಶಗಳು ಜಲಾವೃತ ಗೊಂಡಿದೆ. ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಅಗ್ನಿಶಾಮಕ ದಳ, ಕಂದಾಯ ಇಲಾಖೆ, ಪೊಲೀಸರ ನೆರವಿನಿಂದ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ತೀರವಾಸಿಗಳು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ತಳಂಗರೆ ಪಶ್ಚಿಮ ಭಾಗದಲ್ಲಿ ರಸ್ತೆಗೆ ನೀರು ನುಗ್ಗಿ ಸಂಚಾರಕ್ಕೆ ಅಡಚಣೆಯಾಗಿದೆ. ಬೆಳಿಗ್ಗೆ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಸಂಜೆ ಬಿರುಸುಗೊಂಡಿದೆ.
ಆ. 16ರಂದು ಸಭೆ:
ಇನ್ನು ಭಾರೀ ಮಳೆ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು ಚರ್ಚಿಸಲು ಅಧಿಕಾರಿಗಳ ಸಭೆಯನ್ನು ಆಗಸ್ಟ್ 16ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದೆ. ಸಭೆಯಲ್ಲಿ ನಿಯೋಜಿತ ಜಿಲ್ಲಾಧಿಕಾರಿ ಸಜಿತ್ ಬಾಬು, ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಎನ್. ದೇವಿದಾಸ್ ಹಾಗೂ ಇತರ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಪರೀಕ್ಷೆ ಮುಂದೂಡಿಕೆ:
ಆಗಸ್ಟ್ 31ರಿಂದ ನಡೆಸಲಾಗುವ ಶಾಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ನಿರಂತರ ಮಳೆ ಹಾಗೂ ಪ್ರವಾಹದ ಹಿನ್ನಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ ಎಂದು ರಾಜ್ಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಓಣಂ ರಜೆ ಕಳೆದು ಸೆಪ್ಟೆಂಬರ್ 10ರ ತನಕ ಪರೀಕ್ಷೆಗಳು ನಡೆಯಬೇಕಿತ್ತು. ಪರೀಕ್ಷೆ ನಡೆಯಲಿರುವ ಬದಲಿ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.