ಕಣ್ಣೂರು, ಮಾ.10 (DaijiworldNews/MB) : ತಾಯಿ ತನ್ನ 15 ವರ್ಷದ ಮಗಳೊಂದಿಗೆ ಸೇರಿಕೊಂಡು ಒಟ್ಟು 22 ಲಕ್ಷಕ್ಕಿಂತ ಅಧಿಕ ಮೌಲ್ಯದ ಚಿನ್ನವನ್ನು ಒಳ ಉಡುಪಿನಲ್ಲಿರಿಸಿ ಅಕ್ರಮ ಸಾಗಿಸಲು ಮಾಡಿದ ಯತ್ನವನ್ನು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ.

ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬುಧವಾರ 1 ಕೆಜಿಗಿಂತ ಹೆಚ್ಚು ತೂಕದ, 48 ಲಕ್ಷ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಮೂರು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.
ಒಂದು ಪ್ರಕರಣದಲ್ಲಿ ಐಎಕ್ಸ್ 1746 ವಿಮಾನದಲ್ಲಿ ಶಾರ್ಜಾದಿಂದ ಆಗಮಿಸಿದ ಕೋತುಪರಂಬ ಮೂಲದ ಪ್ರಯಾಣಿಕ ರಾಯಿಸ್ ತನ್ನ ಗುದದ್ವಾರದಲ್ಲಿ ಸುಮಾರು 560 ಗ್ರಾಂ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟಿದ್ದ. ಆತನಿಂದ ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ ಸುಮಾರು 25 ಲಕ್ಷ ರೂ. ಆಗಿದೆ. ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿ ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಇನ್ನೊಂದು ಪ್ರಕರಣದಲ್ಲಿ ಗೋಏರ್ ವಿಮಾನದಲ್ಲಿ ಶಾರ್ಜಾದಿಂದ ಆಗಮಿಸಿದ ತಾಯಿ ಹಾಗೂ ಪುತ್ರಿಯನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದು ಸುಮಾರು 15 ವರ್ಷ ವಯಸ್ಸಿನ ಮಗಳ ಒಳ ಉಡುಪುಗಳಲ್ಲಿ ಸುಮಾರು 350 ಗ್ರಾಂ ಚಿನ್ನವನ್ನು ಅಡಗಿಸಿಟ್ಟಿದ್ದು, ತಾಯಿ ತನ್ನ ಒಳ ಉಡುಪಿನಲ್ಲಿ ಸುಮಾರು 140 ಗ್ರಾಂ ಚಿನ್ನವನ್ನು ಅಡಗಿಸಿಟ್ಟಿದ್ದಳು. ಇಬ್ಬರಿಂದ ಒಟ್ಟು 22 ಲಕ್ಷಕ್ಕಿಂತ ಅಧಿಕ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯನ್ನು ಸಹಾಯಕ ಆಯುಕ್ತ ಮಧುಸೂದನ ಭಟ್, ಸುಪ್ರೀತ್ ಸುಕುಮಾರಣ್ ಹಾಗೂ ತಂಡ ನಡೆಸಿದೆ.