ಮಂಗಳೂರು, ಮಾ.10 (DaijiworldNews/PY): "ಇಂದು ಮಹಿಳೆಯರು ಸಮಾಜದಲ್ಲಿ ಮುಂಚೂಣಿಯಲ್ಲಿದ್ದು, ಎಲ್ಲಾ ಕ್ಷೇತ್ರದಲ್ಲಿ ಅಪರಿಮಿತ ಸಾಧನೆಯನ್ನು ಮಾಡಿರುತ್ತಾರೆ" ಎಂದು ಮಹಾಪೌರ ಪ್ರೇಮಾನಂದ ಶೆಟ್ಟಿ ಹೇಳಿದರು.

ಅವರು ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಮಹಿಳಾ ವೇದಿಕೆ ಜಂಟಿಯಾಗಿ, ಆಗರ್ ಗ್ರೂಪ್, ಇದರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2021 ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಾನಗರಪಾಲಿಕೆಯ ಮೇಯರ್, "ಸವಾಲುಗಳನ್ನು ಸ್ವೀಕರಿಸಿ, ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಮಂಗಳೂರು ಮಹಾನಗರಪಾಲಿಕೆಯು ವಿಶೇಷ ಸವಲತ್ತುಗಳನ್ನು ನೀಡುವುದರೊಂದಿಗೆ, ಮಹಿಳಾ ಸಬಲೀಕರಣಕ್ಕಾಗಿ ಹೆಚ್ಚಿನ ಒತ್ತನ್ನು ನೀಡುತ್ತಿದೆ" ಎಂದು ಹೇಳಿದರು.
ನಂತರ ಮಾತನಾಡಿದ ಉಪಮೇಯರ್ ಸುಮಂಗಲಾ ನಾಯ್ಕ್, "ಮಹಿಳೆಯ ಸ್ಥಾನಮಾನದ ಬಗ್ಗೆ ಹಾಗೂ ಮಹಿಳೆಯ ಇಂದಿನ ಸ್ಥಿತಿಗತಿಯ ಬಗ್ಗೆ ಮಾತನಾಡಿ ಮಹಿಳೆಯ ಬದುಕು ಸಾಧನೆಯ ಹಾದಿಯಾಗಬೇಕು" ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಂಡೇಶ್ವರ ಮಹಿಳಾ ಆರಕ್ಷಕ ಠಾಣೆಯ ಪೋಲಿಸ್ ಇನ್ಸ್ಪೆಕ್ಟರ್ ರೇವತಿ ಮಾತಾನಾಡುತ್ತಾ, "ಮಹಿಳೆ ದೇಶದ ಅತ್ಯುನ್ನತ ಸ್ಥಾನವನ್ನು ಪಡೆಯುವುದರೊಂದಿಗೆ, ಆಕಾಶದೆತ್ತರದಷ್ಟನ್ನು ಸಾಧಿಸಬಲ್ಲಳು. ಪ್ರತಿಯೋರ್ವ ಮಹಿಳೆಯು ದೇಶದ ಅಬ್ಯುದಯಕ್ಕಾಗಿ ಕೈ ಜೋಡಿಸಿ ಪ್ರಗತಿ ಪಥದಲ್ಲಿ ಮುನ್ನಡೆದಲ್ಲಿ ಖಂಡಿತವಾಗಿಯೂ ದೇಶ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವೇ ಇಲ್ಲ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಯೋರ್ವ ಮಹಿಳೆಯು ತನ್ನ ತಾಯಿಗೆ ಋಣಿಯಾಗಿದ್ದು, ಸಾಧನೆಗೈದು ಧನ್ಯತಾ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸಬೇಕು" ಎಂದು ವಿದ್ಯಾರ್ಥಿನಿಯರಿಗೆ ಹೇಳಿದರು.
ಎ.ಜೆ ಆಸ್ಪತ್ರೆಯ ವೈದ್ಯರಾದ ಡಾ.ಪಿ.ಪಿ. ದೇವನ್ ವಿದ್ಯಾರ್ಥಿನಿಯರಿಗೆ ದೈಹಿಕ ಆರೋಗ್ಯವನ್ನು ಕಾಪಾಡುವ ಬಗ್ಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಮಾತಾನಾಡಿ, "ಆಧುನಿಕ ಸಮಾಜದಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯ ಸವಲತ್ತುಗಳು ದೊರೆತ್ತಿದ್ದು, ಮಹಿಳೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಶಕ್ತಳಾಗಿದ್ದಾಳೆ. ಸಮಾಜದ ಬದಲಾಣೆಗಾಗಿ ಮಹಿಳೆಯರು ಕಾರ್ಯ ಪ್ರವೃತ್ತರಾಗಬೇಕು" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೂ. 25,000 ಮೌಲ್ಯದ ಪ್ಯಾಡ್ ವೆಂಡಿಂಗ್ ಮೆಷಿನ್ ಅನ್ನು ಎಸ್.ಎಲ್.ಶೇಟ್ ಡೈಮಂಡ್ ಹೌಸ್, ಲೇಡಿಹಿಲ್ ಸಂಸ್ಥೆಯ ಪರವಾಗಿ ಶರತ್ ಶೇಟ್ ಹಾಗೂ ದಿವ್ಯಾ ಶೇಟ್ ದಂಪತಿಗಳು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.