ಉಳ್ಳಾಲ, ಮಾ. 10 (DaijiworldNews/SM): ಕಾಲೇಜು ವಿದ್ಯಾರ್ಥಿನಿ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಆಶ್ರಯ ಕಾಲನಿ ಎಂಬಲ್ಲಿ ಬುಧವಾರ ನಡೆದಿದೆ. ಕೊಲೆ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಯುವತಿ ಗೆಳೆಯರೆನ್ನಲಾದ ಮೂವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


ಕುಂಪಲ ಆಶ್ರಯ ಕಾಲನಿ ನಿವಾಸಿ ಚಿತ್ತಪ್ರಸಾದ್ ಮತ್ತು ಕವಿತಾ ದಂಪತಿ ಪುತ್ರಿ ಪ್ರೇಕ್ಷಾ(17) ಮೃತದೇಹ ಆತ್ಮಹತ್ಯೆ ನಡೆಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಯಿ ಅಂಗನವಾಡಿಯಲ್ಲಿ ಕೆಲಸಕ್ಕಿದ್ದು, ತಂದೆ ಗ್ಯಾಸ್ ಲೈನ್ ವಾಹನದಲ್ಲಿ ಕಾರ್ಯ ನಿರ್ವಹಿಸುವವರಾಗಿದ್ದಾರೆ. ಇನ್ನೋರ್ವ ಸಹೋದರಿ ಮಂಗಳೂರಿನ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದಾರೆ.
ಮೂವರು ಮನೆಯಲ್ಲಿ ಇಲ್ಲದ ಸಂದರ್ಭ ಕೃತ್ಯ ನಡೆದಿದೆ. ಮಧ್ಯಾಹ್ನ ತಾಯಿ ಅಂಗನವಾಡಿಯಿಂದ ಮನೆಗೆ ಊಟಕ್ಕೆಂದು ಬಂದಾಗ ಮುಂಬಾಗಿಲು ಮುಚ್ಚಿತ್ತು. ಹಿಂಬದಿಯ ಬಾಗಿಲು ತೆರೆದಿತ್ತು. ಒಳಪ್ರವೇಶಿಸಿ ನೋಡಿದಾಗ ಬೆಡ್ ರೂಮಿನಲ್ಲಿ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪ್ರೇಕ್ಷಾ ಮೃತದೇಹ ಪತ್ತೆಯಾಗಿದೆ.
ಬೆಂಗಳೂರಿಗೆ ತೆರಳುವವರಿದ್ದರು:
ಕೊಲ್ಯ ನಿವಾಸಿ ವ್ಯಕ್ತಿಯೋರ್ವರು ಮಾಡೆಲಿಂಗ್ ಶೂಟ್ ಗಾಗಿ ಪ್ರೇಕ್ಷಾಳನ್ನು ಇಂದು ಬೆಂಗಳೂರಿಗೆ ಕೊಂಡೊಯ್ಯುವವರಿದ್ದರು. ಮಧ್ಯಾಹ್ನ 2 ಗಂಟೆಗೆ ಹೊರಡುವ ತಯಾರು ಮಾಡಲಾಗಿತ್ತು. ಆದರೆ ಇದೇ ವಿಚಾರವಾಗಿ ಹೆತ್ತವರು ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಪ್ರೇಕ್ಷಾ ಕಾಲೇಜಿಗೆ ತೆರಳದೆ ಮನೆಯಲ್ಲೇ ಉಳಿದಿದ್ದರು. ಆದರೆ ಇಂದು ಬೆಂಗಳೂರಿಗೆ ತೆರಳಲು ತಯಾರಾಗಿದ್ದ ಪ್ರೇಕ್ಷಾಳ ನಡೆಯನ್ನು ತಾಯಿ ಕವಿತಾ ಬೆಳಿಗ್ಗೆ ವಿರೋಧಿಸಿದ್ದರು. ಮಾಡೆಲಿಂಗ್ ಹವ್ಯಾಸ ಹೊಂದಿದ್ದ ಪ್ರೇಕ್ಷಾ, ಬೆಂಗಳೂರಿನಲ್ಲಿ ದಾರವಾಹಿಯೊಂದರಲ್ಲಿ ನಟಿಸಲು ಅವಕಾಶ ಸಿಕ್ಕಿರುವ ಕುರಿತು ಗೆಳತಿಯರಲ್ಲಿ ತಿಳಿಸಿದ್ದರು. ಅಲ್ಲದೆ ಇತ್ತೀಚೆಗೆ ಮಂಗಳೂರಿನ ಸಾಯಿ ಪ್ಯಾಲೇಸ್ ಹೊಟೇಲಿನಲ್ಲಿ ಜರಗಿದ್ದ ಟೀನ್ ತುಳುನಾಡ್-2020ರಲ್ಲಿ ಟಾಪ್-5 ಫೈನಲಿಸ್ಟ್ ಆಗಿದ್ದರು.
ಮೂವರು ವಶಕ್ಕೆ
ಘಟನೆ ಸಂಬಂಧ ಮುಂಡೋಳಿ ನಿವಾಸಿ ಯತೀನ್ ರಾಜ್, ಆಶ್ರಯಕಾಲನಿ ನಿವಾಸಿ ಸೌರಭ್ ಮತ್ತು ಸುಹಾನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯತೀನ್ ರಾಜ್ ಪ್ರೇಕ್ಷಾಳ ಗೆಳೆಯನಾಗಿದ್ದನು. ಅಸೌಖ್ಯದ ಸಂದರ್ಭ ಔಷಧಿಗೂ ಯತೀನ್ ರಾಜ್ ಕರೆದೊಯ್ಯುತ್ತಿದ್ದನು. ಯುವತಿ ಮೃತದೇಹ ಪತ್ತೆಯಾಗುವ ಕೆಲ ನಿಮಿಷಗಳ ಮುನ್ನ ಮೂವರು ಆಕೆಯ ಮನೆ ಎದುರುಗಡೆ ಸುತ್ತಾಡುವುದನ್ನು ಸ್ಥಳೀಯರು ಕಂಡಿದ್ದರು. ಅವರಿಂದ ದೊರೆತ ಮಾಹಿತಿಯನ್ವಯ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದಿಸಿದರೇ? ಅಥವಾ ಕೊಲೆ ನಡೆಸಿದರೇ ಅನ್ನುವ ಕುರಿತು ವಿಚಾರಣೆ ಆರಂಭಿಸಿದರು.
ಕಮೀಷನರ್ ಭೇಟಿ
ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿದರು. ಅರ್ಧ ಗಮಟೆಯ ಕಾಲ ಪ್ರೇಕ್ಷಾಳ ತಾಯಿ ಜತೆಗೆ ಮಾತನಾಡಿದ್ದೇನೆ. ಮೇಲ್ನೋಟಕ್ಕೆ ಪ್ರಕರಣ ಆತ್ಮಹತ್ಯೆ ಎಂಬುದು ಕಂಡುಬಂದಿದೆ. ವಾರದಿಂದ ಅಸೌಖ್ಯದಿಂದ ಇದ್ದ ಪ್ರೇಕ್ಷಾ, ಇಂದು ಬೆಂಗಳೂರಿಗೆ ತೆರಳುವವಳಿದ್ದಳು. ಇದನ್ನು ತಾಯಿ ಆಕ್ಷೇಪಿಸಿದ್ದರು ಎಂದು ಮಾಧ್ಯಮಗಳಿಗೆ ತಿಳಿಸಿದರು.
ಕೊಲೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ, ಫಾರೆನ್ಸಿಕ್ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಯುವತಿ ಮೃತದೇಹ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಪ್ರೇಕ್ಷಾಳ ತಾಯಿ ಮನೆಗೆ ಬರುವ ಮುನ್ನ, ಪೊಲೀಸ್ ವಶದಲ್ಲಿರುವ ಮೂವರ ಪೈಕಿ ಓರ್ವನ ತಾಯಿ ಬಂದು ಮನೆಯ ಬಾಗಿಲು ಬಡಿದಿರುವುದಾಗಿ ಪ್ರೇಕ್ಷಾಳ ಸಹೋದರಿ ತಿಳಿಸಿದ್ದಾರೆ. ನೆರೆಮನೆಯವರೇ ಆದರೂ ಇಷ್ಟರವರೆಗೆ ಮನೆಗೆ ಬಂದವರಲ್ಲ. ಅವರ ಜತೆಗೆ ಸಂಬಂಧವೂ ಸರಿಯಿರಲಿಲ್ಲ. ಆದರೆ ಮನೆಯ ಬಾಗಿಲು ಬಡಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಯತೀನ್ ರಾಜ್ ಜೊತೆ ಆತ್ಮಹತ್ಯೆ ನಡೆಸುವ ವಿಚಾರವನ್ನು ತಿಳಿಸಿದ್ದು, ಆತ ಸ್ನೇಹಿತ ಸೌರಭ್ ನಲ್ಲಿ ತಿಳಿಸಿದಂತೆ ಆತನ ತಾಯಿ ಬಾಗಿಲು ಬಡಿದಿರುವ ಸಾಧ್ಯತೆಗಳಿವೆ ಅನ್ನುವುದು ಪೊಲೀಸರು ತಿಳಿಸಿದ್ದಾರೆ.