ಮಂಗಳೂರು, ಅ 2: ಇಂದು ನಗರದಾದ್ಯಂತ ಗಾಂಧಿ ಜಯಂತಿಯನ್ನು ಆದ್ದೂರಿಯಾಗಿ ಆಚರಿಸಲಾಯಿತು. ಆದರೆ ನಂತೂರಿನ ರಿಕ್ಷಾ ಚಾಲಕ-ಮಾಲಕ ಸಂಘ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಿದರು. ಇಂದು ರಿಕ್ಷಾ ಚಾಲಕರು ಕೈಯಲ್ಲಿ ಹಾರೆ, ಗುದ್ದಲಿ ಹಿಡಿದು ರಸ್ತೆ ಬದಿ ಸ್ವಚ್ಛಗೊಳಿಸಿದರು. ತೋಡಿನ ತ್ಯಾಜ್ಯ ತೆಗೆದು ಗಿಡಗಂಟಿಗಳನ್ನು ಕತ್ತರಿಸಿ ಪರಿಸರ ಸ್ವಚ್ಛತೆಗೆ ನಾಂದಿ ಹಾಡಿದರು. ನಂತೂರು ರಿಕ್ಷಾ ಚಾಲಕ-ಮಾಲಕ ಸಂಘದ ಈ ಕಾರ್ಯಕ್ಕೆ ನಗರದ ಐ-ಸರ್ಚ್ ಮತ್ತು ಐಎಡಿಎಸ್ ಜೊತೆಯಾಗಿದ್ದು ನಂತೂರು ಸರ್ಕಲ್ ಸುತ್ತಮುತ್ತ ಪರಿಸರವನ್ನು ಶುಚಿಗೊಳಿಸುವ ಮೂಲಕ ಇತರರಿಗೆ ಮಾದರಿಯಾದರು. ನಗರ ನೈರ್ಮಲೀಕರಣಕ್ಕೆ ಮಹಾನಗರ ಪಾಲಿಕೆ ತ್ಯಾಜ್ಯ ಸಂಗ್ರಹ ವಾಹನಗಳನ್ನು ಒದಗಿಸಿತ್ತು. ಇಂದು ಮುಂಜಾನೆಯಿಂದಲೇ ೫೦ಕ್ಕೂ ಹೆಚ್ಚು ರಿಕ್ಷಾ ಚಾಲಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ್ದಲ್ಲದೆ ನಂತೂರು ಸರ್ಕಲ್ ಸುತ್ತಮುತ್ತ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಗುಂಡಿಯನ್ನು ತಾವೇ ಮುಚ್ಚಿದ್ದಾರೆ. ಐ ಸರ್ಚ್ ಮತ್ತು ಇನ್ಸೈಡ್ ಅಟೋಮೋಟಿವ್ ಡಿಜಿಟಲ್ ಸೈನೇಜ್ ರಿಕ್ಷಾ ಚಾಲಕಗ ಸಮಾಜಮುಖಿ ಕಾರ್ಯಕ್ಕೆ ಬೆಂಬಲ ನೀಡಿದ್ದು ಹಿರಿಯ ರಿಕ್ಷಾ ಚಾಲಕರಿಗೆ ಸಾರ್ವಜನಿಕ ಸನ್ಮಾನವನ್ನು ಮಾಡಿದೆ. ಕಳೆದ ೪೨ ವರ್ಷಗಳಿಂದ ರಿಕ್ಷಾ ಚಾಲಕರಾಗಿ ದುಡಿಯುತ್ತಿರುವ ಗಣೇಶ್ ಆಚಾರ್ಯರ ಸಾರ್ವಜನಿಕ ಸೇವೆಯನ್ನು ಗುರುತಿಸುವ ಮೂಲಕ ಇತರ ಚಾಲಕರಿಗೆ ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡಿದೆ. ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಅಧ್ಯಕ್ಷ ಹರೀಶ್ ಮಾಡೂರು, ಕಾರ್ಯದರ್ಶಿ ಆಲ್ಫೋನ್ಸ್ ಡಿಸೋಜ, ಪ್ರಕಾಶ್ ಶಕ್ತಿನಗರ, ಐ ಸರ್ಚ್ನ ಪ್ರಕಾಶ್ ನಾಯಕ್, ಉದಯಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಾಂಧಿ ಜಯಂತಿಯಂದು ರಿಕ್ಷಾ ಚಾಲಕರು ಮಾಡಿದ ಸಮಾಜಮುಖಿ ಕಾರ್ಯ ಎಲ್ಲರಿಂದಲೂ ಪ್ರಶಂಶೆಗೆ ಪಾತ್ರವಾಯಿತು.
ಇನ್ನೊಂದೆಡೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ರೋಟರಿ ಕ್ಲಬ್ ಆಶ್ರಯದಲ್ಲಿ ಸೋಮೇಶ್ವರ ಬೀಚ್ ಹಾಗೂ ಸ್ಟೇಟ್ ಬ್ಯಾಂಕ್ ಸುತ್ತಮುತ್ತಲೂ ಸ್ವಚ್ಚತೆ ಮಾಡಲಾಯಿತು.ಬ್ಯಾಂಕ್ ನ ಪ್ರಾದೇಶಿಕ ನಿರ್ದೇಶಕರಾದ ಕಿಶೋರ್ ತಂಡದ ನೇತೃತ್ವ ವಹಿಸಿದ್ದರು.