ಬಂಟ್ವಾಳ, ಮಾ. 10 (DaijiworldNews/SM): ಖಾಸಗಿ ಬಸ್ ನ ಸೀಟಿನಲ್ಲಿರಿಸಿದ್ದ ಕಾಲೇಜು ವಿದ್ಯಾರ್ಥಿನೋರ್ವಳ ಲ್ಯಾಪ್ ಟಾಪ್ ಕಳವು ಮಾಡಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ಮಾರ್ಚ್ ೧೦ರ ಬುಧವಾರ ನಡೆದಿದೆ.

ದಾವಣಗೆರೆ ಕೆ.ಟಿ.ಜಿ.ನಗರ ಡಾಂಗೆ ಕ್ರಾಸ್ ಪಾರ್ಕ್ ನಿವಾಸಿ ಮಂಜ ಯಾನೆ ಮಂಜುನಾಥ (45) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 50ಸಾವಿರ ಮೌಲ್ಯದ ಲ್ಯಾಪ್ ಟಾಪ್ ನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಯ ವಿವರ
ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮದ ಅಲ್ಲಿಪಾದೆ ನಿವಾಸಿ ಅನನ್ಯ ಅವರು ಎಸ್.ವಿ.ಎಸ್.ಕಾಲೇಜು ವಿದ್ಯಾರ್ಥಿನಿಯಾಗಿದ್ದು 8 ತಾರೀಖಿನಂದು ಕಾಲೇಜು ಮುಗಿಸಿ ಬಿಸಿರೋಡನಿಂದ ಖಾಸಗಿ ಬಸ್ ನಲ್ಲಿ ಮನೆಗೆ ಹೋಗುವ ಸಂದರ್ಭದಲ್ಲಿ ಬಸ್ ನಲ್ಲಿ ಲ್ಯಾಪ್ ಟಾಪ್ ನ್ನು ಇಟ್ಟು ಸೀಟು ಕಾಯ್ದಿರಿಸಿ ಬಸ್ ನಿಂದ ಇಳಿದು ಅಲ್ಲೇ ಇರುವ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಸೀಟ್ ನಲ್ಲಿದ್ದ ಲ್ಯಾಪ್ ಟಾಪ್ ಕಳವು ಆಗಿತ್ತು.
ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಲ್ಯಾಪ್ ಹಿಡಿದುಕೊಂಡು ಪುತ್ತೂರು, ವಿಟ್ಲ ಗುರುವಾಯನಕೆರೆ ಸುತ್ತಾಡಿ ಬಳಿಕ ಬಿಸಿರೋಡಿನಿಂದ ರೈಲು ಮುಖಾಂತರ ಊರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ಪೋಲೀಸರು ಸಂಶಯದ ಮೇಲೆ ಬಂಧಿಸಿ ವಿಚಾರಣೆ ನಡೆಸಿ ದ ವೇಳೆ ಮಾಹಿತಿ ಲಭ್ಯವಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್ ನಿರ್ದೇಶನ ದಂತೆ ಅಪರಾಧ ಪತ್ತೆ ವಿಭಾಗದ ಎಸ್.ಐ.ಕಲೈಮಾರ್ ತನಿಖೆ ಕೈಗೊಂಡು ಆರೋಪಿಗಳ ಪತ್ತೆಗೆ ಎ.ಎಸ್.ಐ.ಜಯರಾಮ್ ರೈ, ಕೃಷ್ಣ ಕುಲಾಲ್, ಉಸ್ಮಾನ್, ಶ್ರೀಕಾಂತ್ , ಮನೋಹರ , ಗೋಣಿಬಸಪ್ಪ, ವಿವೇಕ್, ಕುಮಾರ್ ಸಹಕರಿಸಿದ್ದಾರೆ