ಮಂಗಳೂರು, ಮಾ11 (DaijiworldNews/MS): ಬ್ಯಾಂಕ್ ಅಧಿಕಾರಿಯೆಂದು ಕರೆ ಮಾಡಿ ಓಟಿಪಿ ನಂಬರ್ ಪಡೆದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಯಿಂದ ಖದೀಮರು 6.24 ಲಕ್ಷ ರೂ. ಗಳನ್ನು ಲಪಟಾಯಿಸಿರುವ ಘಟನೆ ನಡೆದಿದೆ.

ಮಾ. 4ರಂದು ನಿವೃತ್ತ ಪೊಲೀಸ್ ಅಧಿಕಾರಿಯ ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿ ತಾನು ಬಂದರು ರಸ್ತೆಯಲ್ಲಿರುವ ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದು, ನಿಮ್ಮ ಖಾತೆಯಿಂದ 2 ಲಕ್ಷ ರೂ. ಖಡಿತಗೊಂಡಿದ್ದು, ಅದರ ಮರುಪಾವತಿಗೆ ಮೊಬೈಲ್ ನಂಬರ್ ಒಟಿಪಿ ಕಳುಹಿಸುತ್ತೇವೆ. ಅದನ್ನು ಹೇಳಿ ಎಂದು ಹಿಂದಿ ಬಾಷೆಯಲ್ಲಿ ಹೇಳಿದ್ದ. ಆ ಬಳಿಕ ಒಟಿಪಿ ಸಂಖ್ಯೆ ಹೇಳಿದ ಸ್ವಲ್ಪ ಹೊತ್ತಿನಲ್ಲೇ 6.24 ಲಕ್ಷ ರೂ. ಖಾತೆಯಿಂದ ಕಡಿಗೊಂಡಿದೆ. ಇದರಿಂದ ದಿಗಿಲುಗೊಂಡ ಅಧಿಕಾರಿ ಮರುದಿನ ಬ್ಯಾಂಕಿಗೆ ತೆರಳಿ ಪರಿಶೀಲಿಸಿದಾಗ ನವದೆಹಲಿಯ ನಾನಾ ಬ್ಯಾಂಕ್ ಗಳ ಖಾತೆಗಳಿಗೆ ಹಣ ಜಮೆ ಆಗಿರುವುದು ಕಂಡುಬಂದಿದೆ. ಈ ಸಂಬಂಧ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.