ಬೆಳ್ತಂಗಡಿ, ಮಾ11 (DaijiworldNews/MS): ತಂದೆ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿ 8 ವರ್ಷದ ಬಾಲಕ ಮೃತಪಟ್ಟ ಘಟನೆ ಮೂಡುಬಿದಿರೆಯಲ್ಲಿ ಮಾ.10 ರ ಬುಧವಾರ ಸಂಜೆ ನಡೆದಿದೆ. ಉಜಿರೆ ಅತ್ತಾಜೆ ನಿವಾಸಿ ಇಬ್ರಾಹಿಂ ಇಬ್ಬಿ ಅವರ ಪುತ್ರ, ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ ಮೂರನೇ ತರಗತಿ ವಿದ್ಯಾರ್ಥಿ ಮುರ್ಷಿದ್ ಮೃತ ಬಾಲಕ.

ಉಜಿರೆ ನಿವಾಸಿಯಾಗಿರುವ ಅತ್ತಾಜೆ ಇಬ್ರಾಹಿಂ ಮತ್ತು ರಹಿಮತ್ ದಂಪತಿಯ ಇಬ್ಬರು ಮಕ್ಕಳಲ್ಲಿ ಮುರ್ಷಿದ್ ಮೊದಲನೆಯವನಾಗಿದ್ದ. ಇಬ್ರಾಹಿಂ ಮೂಡುಬಿದಿರೆಯ ಕಲ್ಲಿನಕೋರೆಗೆ ಹೋಗುವಾಗ ಬಾಲಕನೂ ಜತೆಗೆ ತೆರಳಿದ್ದನೆಂದು ಹೇಳಲಾಗಿದೆ. ಈ ವೇಳೆ ತಂದೆಯೇ ಚಾಲಕನಾಗಿ ಲಾರಿ ಚಲಾಯಿಸಿದ ವೇಳೆ ಬಾಲಕ ಆಕಸ್ಮಿಕವಾಗಿ ಅದರ ಚಕ್ರದಡಿ ಸಿಲುಕಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಉಜಿರೆಯ ಕೊಟ್ರೋಡಿ ಕಾಂಪೌಂಡ್ ನ ರೈಫಾ ಗಾರ್ಡನ್ ಫ್ಲಾಟ್ನಲ್ಲಿ ನೆಲೆಸಿದ್ದ ದಂಪತಿಗೆ ನಾಲ್ಕು ವರ್ಷ ಪ್ರಾಯದ ಪುತ್ರಿ ಇದ್ದಾಳೆ. .ಘಟನೆ ನಡೆದ ತಕ್ಷಣ ಬಾಲಕನನ್ನು ಮೂಡುಬಿದಿರೆ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅದಾಗಲೇ ಆತ ಮೃತಪಟ್ಟಿದ್ದ. ಅಲ್ಲೇ ಮರಣೋತ್ತರ ಪರೀಕ್ಷೆ ಕೈಗೊಂಡು ರಾತ್ರಿ 12.30ರ ವೇಳೆಗೆ ಉಜಿರೆ ಮಸ್ಜಿದ್ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಘಟನೆ ಕುರಿತು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.