ಮಂಗಳೂರು, ಮಾ.11 (DaijiworldNews/MB) : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಆಶ್ರಯ ಕಾಲನಿ ಎಂಬಲ್ಲಿ ಬುಧವಾರ ಕಾಲೇಜು ವಿದ್ಯಾರ್ಥಿನಿ ಪ್ರೇಕ್ಷಾ(17) ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ಈಗಾಗಲೇ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಪ್ರೇಕ್ಷಾಳ ಸಾವಿಗೆ ಅಲ್ಲಿರುವ ಗಾಂಜಾ ತಂಡದಲ್ಲಿರುವವರು ಕಾರಣ ಎಂಬುದು ಮನೆಯವರ ಆರೋಪವಾಗಿದೆ.
ಕುಂಪಲದ ಆಶ್ರಯ ಕಾಲನಿ ಒಂದು ಐಂದು ಸೆಂಟ್ಸ್ ಮನೆಗಳ ಸಮೂಹವಾಗಿದ್ದು ಅಲ್ಲಿ ಮನೆಗಳು ಒತ್ತೊತ್ತಾಗಿದೆ. ಏನೇ ನಡೆದರೂ ಅಕ್ಕಪಕ್ಕದ ಮನೆಯವರಿಗೆ ತಿಳಿಯದೆ ಇರಲ್ಲ. ಪಕ್ಕದ ಮನೆಯವರೊಬ್ಬರು ಮಧ್ಯಾಹ್ನದ ವೇಳೆಗೆ ತಾಯಿಗೆ ಕರೆ ಮಾಡಿದ್ದರು ಎಂದು ಕೂಡಾ ಹೇಳಲಾಗಿದೆ.
ಗಾಂಜಾ ತಂಡದ ಕೈವಾಡ?
ಇನ್ನು ಕುಂಪಲ ಆಶ್ರಯ ಕಾಲನಿ ಪ್ರದೇಶದಲ್ಲಿ ಗಾಂಜಾ ಮಾರಾಟ ಸೇರಿದಂತೆ ಗಾಂಜಾ ವ್ಯಸನಿಗಳ ಸಂಖ್ಯೆ ಅಧಿಕವಾಗುತ್ತಿದೆ. ಈ ಬಗ್ಗೆ ಎಷ್ಟು ಬಾರಿ ಪೊಲೀಸರಿಗೆ ದೂರು ನೀಡಿದರೂ ಏನೂ ಪ್ರಯೋಜನವಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಆರೋಪ. ಈ ಗಾಂಜಾ ವ್ಯಸನಿಗಳು ಆ ಬೀದಿಗಳಲ್ಲಿ ಓಡಾಡುವ ಯುವತಿಯರು, ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರು. ಈ ಬಗ್ಗೆ ಹಾಗೂ ಗಾಂಜಾ ಸಾಗಾಟ, ಸೇವನೆ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಈವರೆಗೂ ಕೈಗೊಂಡಿಲ್ಲ. ಹೇಗೋ ತಿಳಿಯದು ಯಾರು ದೂರು ನೀಡಿರುವುದು ಎಂದು ವ್ಯಸನಿಗಳು ಹಾಗೂ ಸಾಗಾಟಕರಿಗೆ ತಿಳಿದು ಅವರು ಬಂದು ಬೆದರಿಕೆ ಹಾಕುತ್ತಾರೆ. ಈ ಪ್ರದೇಶದಲ್ಲಿ ಗಾಂಜಾ ವ್ಯಸನಿಗಳದ್ದೇ ಕಾಟ ಅತಿಯಾಗಿದೆ ಎನ್ನುತ್ತಾರೆ ಸ್ಥಳೀಯರು.
ಬಂಧಿತ ಮುಂಡೋಳಿ ನಿವಾಸಿ ಯತೀನ್ ರಾಜ್, ಆಶ್ರಯಕಾಲನಿ ನಿವಾಸಿ ಸೌರಭ್ ಮತ್ತು ಸುಹಾನ್ ಪೈಕಿ ಯತೀನ್ ರಾಜ್ ಗಾಂಜಾ ವ್ಯಸನಿಗಳ ತಂಡದಲ್ಲಿದ್ದು ಆತ ಈ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದಾನೆ ಎಂದು ಮನೆಯವರ ಆರೋಪವಾಗಿದೆ. ಆತ ಪ್ರೇಕ್ಷಾಳೊಂದಿಗೆ ಸಲುಗೆಯಿಂದ ಇದ್ದು ಆಕೆ ಮಾಡೆಲಿಂಗ್ ಮಾಡುವುದು ಆತನಿಗೆ ಇಷ್ಟವಿರಲಿಲ್ಲ. ಪ್ರೇಕ್ಷಾ ಬೆಂಗಳೂರಿಗೆ ಹೋಗದಂತೆ ಆತ ಆಕೆಯ ಮೇಲೆ ಒತ್ತಡ ಹಾಕುತ್ತಿದ್ದ ಎಂದು ಹೇಳಲಾಗಿದೆ.
ಪ್ರೇಕ್ಷಾ ಪ್ರತಿಭಾನಿತ್ವ ವಿದ್ಯಾರ್ಥಿಯಾಗಿದ್ದು ಕಲಿಕೆ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದರು. ಹಾಡುಗಾರಿಕೆ, ಡ್ಯಾನ್ಸ್ ಹಾಗೂ ಮಾಡೆಲಿಂಗ್ ಹವ್ಯಾಸವನ್ನು ಹೊಂದಿದ್ದ ಪ್ರೇಕ್ಷಾ ಹಲವು ಫೋಟೋ ಶೂಟ್ಗಳಲ್ಲಿ ಭಾಗಿಯಾಗಿದ್ದರು. ಬುಧವಾರ ಫೋಟೋ ಶೂಟ್ಗಾಗಿ ಬೆಂಗಳೂರಿಗೆ ಹೋಗಬೇಕಾಗಿದ್ದ ಪ್ರೇಕ್ಷಾ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇನ್ನು ಆಕೆಯ ಈ ಮಾಡೆಲಿಂಗ್ ಹವ್ಯಾಸವೇ ಆಕೆಯ ಪ್ರಾಣಕ್ಕೆ ಕುತ್ತಾಯಿತೇ ಎಂಬ ಅನುಮಾನ ಕೂಡಾ ಉಂಟಾಗಿದೆ.
ಮಧ್ಯಾಹ್ನ ತಾಯಿ ಅಂಗನವಾಡಿಯಿಂದ ಮನೆಗೆ ಊಟಕ್ಕೆಂದು ಬಂದಾಗ ಮುಂಬಾಗಿಲು ಮುಚ್ಚಿತ್ತು. ಹಿಂಬದಿಯ ಬಾಗಿಲು ತೆರೆದಿತ್ತು. ಒಳಪ್ರವೇಶಿಸಿ ನೋಡಿದಾಗ ಬೆಡ್ ರೂಮಿನಲ್ಲಿ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪ್ರೇಕ್ಷಾ ಮೃತದೇಹ ಪತ್ತೆಯಾಗಿದೆ. ಇದೊಂದು ವ್ಯವಸ್ಥಿತ ಸಂಚು ಎಂಬುದು ಮನೆಯವರು ಹಾಗೂ ಸ್ಥಳೀಯರ ಆರೋಪವಾಗಿದೆ.
ಇನ್ನು ಮನೆಗೆ ಬಂದಿದ್ದಾರೆ ಎಂದು ಹೇಳಲಾದ ಈಗ ಬಂಧನಕ್ಕೆ ಒಳಗಾಗಿರುವ ಮೂವರ ಪೈಕಿ ಓರ್ವನಾದ ಯತೀನ್ ರಾಜ್ ಪ್ರೇಕ್ಷಾಳನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗಿದೆ. ಆದರೆ ಅದು ವನ್ ಸೈಡ್ ಲವ್ ಆಗಿತ್ತು ಎಂದು ಕೂಡಾ ಎನ್ನಲಾಗಿದೆ. ಆಕೆ ಮಾಡೆಲಿಂಗ್ ಮಾಡುವುದು ಆತನಿಗೆ ಇಷ್ಟವಿರಲಿಲ್ಲ ಈ ಕಾರಣಕ್ಕೆ ಆಕೆಯೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ. ಬೆಂಗಳೂರಿಗೆ ಆಕೆ ಫೋಟೋಶೂಟ್ಗೆ ಹೋಗುವುದಕ್ಕೂ ಆತ ತಕರಾರು ಎತ್ತಿದ್ದು ಅದನ್ನು ಲೆಕ್ಕಿಸದ ಪ್ರೇಕ್ಷಾ ಬೆಂಗಳೂರಿಗೆ ಹೋಗಲು ಸಿದ್ದಳಾಗಿದ್ದಳು. ಅದರಂತೆ ಆಕೆ ಕಾಲೇಜಿಗೆ ತೆರಳಿರಲಿಲ್ಲ. ಬ್ಯೂಟಿ ಪಾರ್ಲರ್ಗೆ ಕೂಡಾ ತೆರಳಿ ಮನೆಗೆ ಬಂದಿದ್ದಳು ಎನ್ನಲಾಗಿದೆ. ಬೆಂಗಳೂರಿಗೆ ತೆರಳಲು ಇಷ್ಟೆಲ್ಲಾ ತಯಾರಿ ಮಾಡಿಕೊಂಡಿದ್ದ ಆಕೆ ಡಿಢೀರ್ ಆತ್ಮಹತ್ಯೆ ಹೇಗೆ ಮಾಡಿಕೊಳ್ಳಲು ಸಾಧ್ಯ ಎಂಬುದು ಸ್ಥಳೀಯರ ವಾದವಾಗಿದೆ. ಸ್ಥಳೀಯರು ಹಾಗೂ ಮನೆಯವರು ಇದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ.