ಸುಳ್ಯ, ಆ 16: ವಿದ್ಯುತ್ ಕಂಬ ದುರಸ್ಥಿ ವೇಳೆ ಲೈನ್ಮೆನ್ ಸಾವನ್ನಪ್ಪಿದ ಘಟನೆ ಸುಳ್ಯ ಸಮೀಪದ ಬೊಳಿಯಮಜಲಿನಲ್ಲಿ ನಡೆದಿದೆ. ಆಲೆಟ್ಟಿ ಗ್ರಾಮದ ಪರಿವಾರಕಾನ ರಾಮಣ್ಣ ನಾಯ್ಕ ಎಂಬವರ ಪುತ್ರ ಜನಾರ್ಧನ ನಾಯ್ಕ(48) ಎಂಬವರು ಸಾವನ್ನಪ್ಪಿದ ದುರ್ದೈವಿ.ಸುಳ್ಯ ಮೆಸ್ಕಾಂನ ಹೊರಗುತ್ತಿಗೆ ಆಧಾರದಲ್ಲಿ ಕಳೆದ 20 ವರ್ಷಗಳಿಂದ ಲೈನ್ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಜತೆಯಲ್ಲಿ ಸಹೋದರ ಹರೀಶ್ ನಾಯ್ಕ ಅವರು ಸಹ ಕೆಲಸಮಾಡುತ್ತಿದ್ದರು. ಆದರೆ ಬುಧವಾರ ಸಂಜೆ ವೇಳೆ ಜಟ್ಟಿಪಳ್ಳ ಸಮೀಪದ ಬೊಳಿಯಮಜಲಿನಲ್ಲಿ ಜನಾರ್ಧನ ನಾಯ್ಕ ಮತ್ತು ಅವರ ಸಹೋದರ ಹರೀಶ್ ನಾಯ್ಕ ಅವರು ಇಬ್ಬರೂ ಜತೆಯಲ್ಲಿ ಹೆಚ್ಟಿ ಲೈನ್ನಲ್ಲಿ ಬೆಳಿಗ್ಗಿನಿಂದಲೇ ಕೆಲಸ ಮಾಡುತ್ತಿದ್ದರು.
ಅವಘಡ ಸಂಭವಿಸಿದ್ದ ಸಂದರ್ಭ ಸಹೋದರರಿಬ್ಬರೂ ಒಂದೇ ವಿದ್ಯುತ್ ಕಂಬದಲ್ಲಿ ಕೆಲಸಮಾಡುತ್ತಿದ್ದರು. ಹರೀಶ್ ನಾಯ್ಕ ಕಂಬದ ಮಧ್ಯಭಾಗದಲ್ಲಿದ್ದು, ಜನಾರ್ಧನ ನಾಯ್ಕ ಅವರು ಕಂಬದ ತಂತಿಯಲ್ಲಿ ದುರಸ್ಥಿ ಮಾಡುತ್ತಿದ್ದರು.ಇದೇ ವೇಳೆ ಮೆಸ್ಕಾಂ ಖಾಯಂ ಲೈನ್ಮೆನ್ ಏಕಾಏಕಿ ಚಾರ್ಜ್ ಮಾಡಿದಾಗ ಜನಾರ್ಧನ ನಾಯ್ಕ ವಿದ್ಯುತ್ ಸ್ಪರ್ಶದಿಂದ ಶರೀರ ಸಂಪೂರ್ಣ ಸುಟ್ಟುಹೋಗಿ ವಿದ್ಯುತ್ ಕಂಬದಲ್ಲೇ ಸಾವನ್ನಪ್ಪಿದರು. ಈ ವಿಷಯ ತಿಳಿದ ಸುಳ್ಯ ಮೆಸ್ಕಾಂ ಎಇಇ ಹರೀಶ್ ನಾಯ್ಕ ಮತ್ತು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಶವವನ್ನು ಇಳಿಸಿ, ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿ ಶವಪರೀಕ್ಷೆ ಮಾಡಲಾಯಿತು. ಸುಳ್ಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಜನಾರ್ಧನ ನಾಯ್ಕ ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮನೆಯ ಆಧಾರ ಸ್ತಂಭ: ಜನಾರ್ಧನ ನಾಯ್ಕ 20 ವರ್ಷಗಳಿಂದ ವಿದ್ಯುತ್ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಇವರ ಆದಾಯದಲ್ಲೆ ಮನೆಯ ನಿರ್ವಹಣೆ ನಡೆಯುತ್ತಿತ್ತು. ಓರ್ವ ಪುತ್ರಿ ಇದ್ದು, ಈಕೆ ಪದವಿ ವಿದ್ಯಾರ್ಥಿನಿ. ಮನೆಯ ಆಧಾರ ಸ್ತಂಭವೇ ಕಳಚಿದಂತಾಗಿದ್ದು, ಮನೆಮಂದಿ ದಿಕ್ಕು ತೋಚದಂತಾಗಿದ್ದಾರೆ.