ಮಂಗಳೂರು, ಮಾ.11 (DaijiworldNews/MB) : ಕರ್ನಾಟಕದ ಕರಾವಳಿ ಪ್ರದೇಶದಲ್ಲಿ, ದೈವಗಳನ್ನು ದೇವರಿಗಿಂತ ಹೆಚ್ಚು ಪೂಜಿಸಲಾಗುತ್ತದೆ. ಪಾಪ ಮಾಡುವ ಯಾರನ್ನೂ ದೈವ ಬಿಡುವುದಿಲ್ಲ ಎಂಬ ನಂಬಿಕೆಯೂ ಇದೆ. ಇದನ್ನು ಸಾಬೀತುಪಡಿಸಲು ಸಾವಿರಾರು ಉದಾಹರಣೆಗಳಿವೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ದೈವಗಳ ಹೆಸರನ್ನು ನಿಂದಿಸುವ ಮತ್ತು ಅವಹೇಳನಕಾರಿ ಕಾಮೆಂಟ್ಗಳನ್ನು ಮಾಡಲಾಗುತ್ತಿದೆ. ಆದ್ದರಿಂದ ತುಳುನಾಡ ದೈವಗಳ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡುವ ಹಾಗೂ ದೈವಗಳ ಹೆಸರನ್ನು ಬಳಸಿಕೊಳ್ಳುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಯುವಕರ ಗುಂಪೊಂದು ಪ್ರಯತ್ನಿಸಿದೆ.

ಪ್ರಸ್ತುತ ತುಳುನಾಡಿನ ಜನಪ್ರಿಯ ದೈವಗಳ ಫೋಟೋಗಳು ಫೇಸ್ಬುಕ್ ಮತ್ತು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರ ವಾಟ್ಸಾಪ್ನಲ್ಲಿ ನಾವು ನೋಡುತ್ತೇವೆ. ಇದಲ್ಲದೆ, ಕೆಲವರು ದೈವಗಳ ಫೋಟೋಗಳಿಗೆ ಹಿನ್ನೆಲೆ ಸಂಗೀತವನ್ನು ಹಾಕುತ್ತಾರೆ. ಆದರೆ ಅದು ಫೋಟೋಗಳಿಗೆ ಸಂಬಂಧಿಸಿದ್ದಾಗಿರುವುದಿಲ್ಲ. ಅಂತಹದ್ದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಕೆಲವರು ದೈವಗಳ ಹೆಸರನ್ನು ತಮ್ಮ ಟ್ರೋಲ್ ಪೇಜ್ಗಳು ಹಾಗೂ ಮನರಂಜನೆಗಾಗಿ ಬಳಸಿಕೊಳ್ಳುತ್ತಾರೆ. ಅದಕ್ಕಾಗಿಯೇ, 'ಯುವ ತುಳುನಾಡು' ಹೆಸರಿನ ಯುವಕರ ಗುಂಪು ದೈವಗಳ ಫೋಟೋಗಳು ಮತ್ತು ವಿಡಿಯೋಗಳನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಹೋರಾಟ ನಡೆಸಲು ಸಜ್ಜಾಗಿದೆ. ಈ ಗುಂಪು ಸಾಮಾಜಿಕ ಮಾಧ್ಯಮದಲ್ಲಿ ದೈವಗಳ ಹೆಸರು, ಫೋಟೋ, ವಿಡಿಯೋ ಬಳಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ದೈವಗಳ ಹೆಸರು ಮತ್ತು ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವ ನೆಟಿಜನ್ಗಳಿಗೆ ಈ ಗುಂಪಿನಲ್ಲಿರುವ ಪ್ರಭಾವಿಗಳು ಎಚ್ಚರಿಕೆ ನೀಡಿದ್ದರು. ಆದರೆ ನೆಟಿಜನ್ಗಳು ಇದಕ್ಕೆ ಕ್ಯಾರೇ ಎನ್ನದ ಕಾರಣ ಈಗ ಈ ಗುಂಪು ಕಾನೂನು ಕ್ರಮಕ್ಕೆ ಮುಂದಾಗಿದೆ. ಅವರು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಇದಲ್ಲದೆ, ಅವರು ಸೈಬರ್ ಕ್ರೈಮ್ ಪೊಲೀಸರು ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಪುರಾವೆಗಳೊಂದಿಗೆ ದೂರುಗಳನ್ನು ದಾಖಲಿಸಿದ್ದಾರೆ.
ಪೊಲೀಸರು ಈಗಾಗಲೇ ಅಂತಹ 72 ಫೇಸ್ಬುಕ್ ಗುಂಪುಗಳ ನಿರ್ವಾಹಕರನ್ನು ಪತ್ತೆ ಹಚ್ಚಿದ್ದಾರೆ ಹಾಗೆಯೇ ಆ ಫೇಸ್ಬುಕ್ ಗುಂಪುಗಳನ್ನು ಅಳಿಸಲಾಗಿದೆ. ಇದಲ್ಲದೆ, ಅಪರಾಧವನ್ನು ಪುನರಾವರ್ತಿಸದಂತೆ ಪೊಲೀಸರು ಅವರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡಿದ್ದಾರೆ.
ಆಶ್ಚರ್ಯಕರ ಸಂಗತಿಯೆಂದರೆ, ತುಳುನಾಡಿನ ದೈವಗಳ ಹೆಸರು ಮತ್ತು ಫೋಟೋಗಳನ್ನು ಬಳಸುವುದರ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿರುವ ಯುವ ತುಳುನಾಡು ಗುಂಪಿನ ನೇತೃತ್ವವನ್ನು ರೋಶನ್ ಮತ್ತು ರಿತೇಶ್ ಡಿಸೋಜಾ ಎಂಬ ಇಬ್ಬರು ಕ್ರಿಶ್ಚಿಯನ್ ಯುವಕರು ವಹಿಸಿದ್ದಾರೆ. ಒಟ್ಟಾರೆಯಾಗಿ ಇದು ತುಳುನಾಡಿನ ದೈವಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಳಸುವ ಎಲ್ಲರಿಗೂ ಒಂದು ಎಚ್ಚರಿಕೆಯ ಕರೆಗಂಟೆಯಾಗಿದೆ.