ಉಡುಪಿ, ಮಾ.11 (DaijiworldNews/MB) : ಎಂಟನೇ ರಾಜ್ಯ ಬಜೆಟ್ ಮಂಡಿಸಿದ್ದಕ್ಕಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಶ್ಲಾಘಿಸಿದರು. ಮಾರ್ಚ್ 11 ರ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ''ಈ ಬಜೆಟ್ ಗಾತ್ರ 2,46,207 ಕೋಟಿ ರೂ. ಆಗಿದೆ. ಇದು ಸಮತೋಲಿತ ಬಜೆಟ್ ಆಗಿದ್ದು, ಇದು ರೈತರು ಮತ್ತು ಮಹಿಳೆಯರ ಕಲ್ಯಾಣವನ್ನು ಗುರಿಯಾಗಿರಿಸಿಕೊಂಡಿದೆ. ಯಾವುದೇ ಹೆಚ್ಚುವರಿ ತೆರಿಗೆ ನೀಡದೆ ಎಲ್ಲಾ ಜಿಲ್ಲೆಗಳಿಗೆ ಸಮಾನ ಪ್ರಾಮುಖ್ಯತೆ ನೀಡುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ'' ಎಂದು ಹೇಳಿದರು. ಹಾಗೆಯೇ, ''ಕೇಂದ್ರ ಕೃಷಿ ಕಾನೂನುಗಳನ್ನು ಬೆಂಬಲಿಸಿ ಬಿಜೆಪಿಯಿಂದ ರ್ಯಾಲಿ ಆಯೋಜಲಿದ್ದೇವೆ'' ಎಂದು ತಿಳಿಸಿದರು.


''ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ಕಾಂಗ್ರೆಸ್ ದುರುದ್ದೇಶಪೂರಿತ ಮತ್ತು ತಪ್ಪು ಮಾಹಿತಿ ನೀಡುವ ಅಭಿಯಾನದಲ್ಲಿ ತೊಡಗಿದೆ. ಆದ್ದರಿಂದ, ಈ ಅಭಿಯಾನದ ವಿರುದ್ಧ, ಮತ್ತು ಕೃಷಿ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಲು, ಜಿಲ್ಲೆಯ ಬಿಜೆಪಿ ಏಪ್ರಿಲ್ ಎರಡನೇ ವಾರದಲ್ಲಿ ಬೈಂದೂರಿನಿಂದ ಉಡುಪಿಯವರೆಗೆ ಪಾದಯಾತ್ರೆಯನ್ನು ಆಯೋಜಿಸುತ್ತದೆ'' ಎಂದು ಅವರು ಹೇಳಿದರು.
''ಮಾರ್ಚ್ 20 ರಿಂದ 32 ಕೇಂದ್ರಗಳಲ್ಲಿ ಗ್ರಾಮಗಳಲ್ಲಿ ತಂಗಲು ಬಿಜೆಪಿ ಜಿಲ್ಲಾ ಬಿಜೆಪಿ ನಿರ್ಧರಿಸಿದೆ. ಈ ಕಾರ್ಯಕ್ರಮದಡಿ ಐದರಿಂದ ಆರು ಜನರ ತಂಡ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಉಳಿಯಲಿದೆ. ಸಂಜೆ 5 ಗಂಟೆಗೆ ಸಭೆ ನಡೆಯಲಿದ್ದು, ಪಕ್ಷದ ಸಕ್ರಿಯ ಕಾರ್ಯಕರ್ತರೊಂದಿಗೆ ಸಮಾಲೋಚನೆ ಮತ್ತು ಇತರ ವಿಷಯಗಳ ಚರ್ಚೆ ನಡೆಯಲಿವೆ. 30 ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ 26 ಮತ್ತು 85 ತಾಲ್ಲೂಕು ಪಂಚಾಯತ್ ಸ್ಥಾನಗಳಲ್ಲಿ 70 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಬಿಜೆಪಿ ಹೊಂದಿದೆ'' ಎಂದು ಅವರು ಹೇಳಿದರು.
"ಮುಖ್ಯಮಂತ್ರಿ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. 1.5 ಲಕ್ಷ ಕಿಲೋ ಲೀಟರ್ ಡೀಸೆಲ್ಗೆ ತೆರಿಗೆ ಭಾಗವನ್ನು ಮೀನುಗಾರರಿಗೆ ಮರುಪಾವತಿ ಮಾಡುವ ಬದಲು, ವಿತರಣಾ ಹಂತದಲ್ಲಿ ಡೀಸೆಲ್ ಅನ್ನು ತೆರಿಗೆ ಮುಕ್ತವಾಗಿ ವಿತರಿಸಲು ಅವರು ಕ್ರಮ ಕೈಗೊಂಡಿದ್ದಾರೆ. ಸಮುದ್ರ ಸಂಪನ್ಮೂಲಗಳನ್ನು ಅನ್ವೇಷಣೆಗೆ 62 ಕೋಟಿ ರೂ., ಪ್ರವಾಸೋದ್ಯಮ ಅಭಿವೃದ್ಧಿ, ಹಂಗಾರಕಟ್ಟೆಯಿಂದ ಮಣಿಪಾಲಗೆ ಜಲಮಾರ್ಗ ಅಭಿವೃದ್ಧಿ, ಮರವಂತ ಬೀಚ್ ಅಭಿವೃದ್ದಿಗೆ 500 ಕೋಟಿ ರೂ. ಮೀಸಲಿಡಲಾಗಿದೆ'' ಎಂದು ಹೇಳಿದರು.
''ಮಹಿಳಾ ಅಭಿವೃದ್ಧಿ ಯೋಜನೆಗಳಿಗೆ 37,188 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಮಹಿಳಾ ಉದ್ಯಮಿಗಳಿಗೆ 4 ಕೋಟಿ ಬಡ್ಡಿಗೆ ಎರಡು ಕೋಟಿ ರೂಪಾಯಿಗಳವರೆಗೆ ಸಾಲ ಸಿಗಲಿದೆ'' ಎಂದು ಸುರೇಶ್ ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ಸದಸ್ಯೆ ಶಿಲ್ಪಾ ಸುವರ್ಣ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.