ಮಂಗಳೂರು, ಮಾ12 (DaijiworldNews/MS): ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಅದರೊಳಗಿದ್ದ 40 ಸಾವಿರ ಮೌಲ್ಯದ ವಿದೇಶಿ ಕರೆನ್ಸಿ, 20 ಸಾವಿರ ನಗದು, ಪಾಸ್ ಪೋರ್ಟ್ ಮತ್ತಿತ್ತರ ವಸ್ತುಗಳನ್ನು ದೋಚಿದ ಘಟನೆ ಮಾ.11ರ ಗುರುವಾರ ಮಧ್ಯಾಹ್ನದ ಸುಮಾರಿಗೆ ನಗರದ ಉರ್ವ ಚಿಲಿಂಬಿ ಮೋರ್ ಮಳಿಗೆಯ ಬಳಿ ನಡೆದಿದೆ.

ಮೂಡುಶೆಡ್ಡೆಯ ಚೇತನ್ ಕುಮಾರ್ ಕದ್ರಿ ಅವರು ಹಣ ಮತ್ತು ಇತರ ಸೊತ್ತು ಕಳೆದುಕೊಂಡವರು. ಚೇತನ್ ಕುಮಾರ್ ಕದ್ರಿ ಅವರು ಪತ್ನಿಯ ಜೊತೆ ಸಾಯಿಬಾಬಾ ಮಂದಿರಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ ವಾಪಸ್ ಬರುವಷ್ಟರಲ್ಲಿ ತಮ್ಮ ಕೈಚಳಕ ತೋರಿದ್ದಾರೆ.
ಕಾರಿನ ಎಡಬದಿಯ ಹಿಂಬದಿಯ ಗಾಜನ್ನು ಒಡೆದು ಕಳ್ಳರು ಕಾರಿನ ಒಳಗಡೆ ಇದ್ದ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಬ್ಯಾಗನಲ್ಲಿ ನಗದು, ವಿದೇಶಿ ಕರೆನ್ಸಿ, ಎಟಿಎಂ ಕಾರ್ಡ್ ,ಆಧಾರ್ ಕಾರ್ಡ್, ಎಮಿರೆಟ್ಸ್ ಐಡಿ, ಪತ್ನಿಯ ದುಬೈ ಇಸ್ಲಾಮಿಕ್ ಬ್ಯಾಂಕ್ ನ ಎಟಿಎಂ ಕಾರ್ಡ್ , ಪಾಸ್ ಪೋರ್ಟ್ ಇತ್ತು ಎಂದು ಉರ್ವ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಚೇತನ್ ಕುಮಾರ್ ದಂಪತಿ ದುಬೈನಲ್ಲಿದ್ದು ಇತ್ತೀಚೆಗೆ ಊರಿಗೆ ಬಂದಿದ್ದು ಮಾ.12 ರ ಇಂದು ದುಬೈಗೆ ಹೋಗುವವರಿದ್ದರು.
ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.