ಮಂಗಳೂರು, ಮಾ.12 (DaijiworldNews/PY): ನಗರದ ಕದ್ರಿ ದೇವಾಲಯದ ಸಮೀಪ ಗಿಣಿಗಳನ್ನು ಹಿಡಿದುಕೊಂಡು ಗಿಳಿಶಾಸ್ತ್ರ ಹೇಳುತ್ತಿದ್ದ ಐದು ಮಂದಿಯನ್ನು ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀಧರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಅವರಿಂದ ಐದು ಗಿಣಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಸಾಂದರ್ಭಿಕ ಚಿತ್ರ
ಬಂಧಿತರನ್ನು ಬೆಂಗಳೂರಿನ ಯಶವಂತರಪುರ ಗೊರಗುಂಟೆಪಾಳ್ಯದ ನಿವಾಸಿಗಳಾದ ಬಸವರಾಜ್ ಹಾಗೂ ಅಶೋಕ್ ಬೋರ, ಪಿಲ್ಲಹಳ್ಳಿಯ ನಿವಾಸಿಗಳಾದ ರಾಘವೇಂದ್ರ, ದುರ್ಗೇಶ್ ನಾಯಕರ್ ಹಾಗೂ ಅಣ್ಣಪ್ಪ ಆರ್ ಎಂದು ಗುರುತಿಸಲಾಗಿದೆ.
ಮಾರ್ಚ್ 11ರ ಗುರುವಾರ ಬೆಳಗ್ಗೆ ಕದ್ರಿ ದೇವಾಲಯಕ್ಕೆ ಭೇಟಿ ನೀಡಿದ ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ ಸಂಘಟನೆಯ ಕಾರ್ಯಕರ್ತರೊಬ್ಬರು ಗಿಣಿಗಳ ಪೆಟ್ಟಿಗಳಳೊಂದಿಗೆ ಇದ್ದ ವ್ಯಕ್ತಿಗಳ ಬಗ್ಗೆ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಶ್ರೀಧರ್ ಅವರ ಗಮನಕ್ಕೆ ತಂದಿದ್ದರು.
ತಕ್ಷಣವೇ ಅವರು ತಮ್ಮ ಇಲಾಖೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಗಿಣಿ ಪೆಟ್ಟಿಗೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಮಂದಿ ಗಿಣಿ ಶಾಸ್ತ್ರ ಹೇಳುವ ನೆಪದಲ್ಲಿ ಅರಣ್ಯದ ಗಿಣಿಗಳನ್ನು ಹಿಡಿದು ಅವರುಗಳ ರೆಕ್ಕೆಯ ಗರಿ, ಮೂತಿಯನ್ನಯ ಕತ್ತರಿಸಿ, ಅವುಗಳಿಗೆ ಹೊಡೆದು ತಾವು ಹೇಳಿದ ಕೂಡಲೇ ಪೆಟ್ಟಿಗೆಯಿಂದ ಹೊರ ಬಂದು ಶಾಸ್ತ್ರದ ಕಾರ್ಡ್ ಅನ್ನು ತೆಗದು ಪುನಃ ಪೆಟ್ಟಿಗೆಯೊಳಗೆ ಹೋಗಿ ಅವುಗಳನ್ನು ಬಂಧಿಯಾಗುವಂತೆ ಮಾಡುತ್ತಾರೆ.
"ವನ್ಯ ಜೀವಿಗಳ ಸಂರಕ್ಷಣಾ ಕಾಯ್ದೆಯ ಪ್ರಕಾರ, ಯಾವುದೇ ಅರಣ್ಯ ಜೀವಿಗಳನ್ನು ಹಿಡಿದು ಹಿಂಸೆ ನೀಡುವುದು, ಬಂಧಿಸುವುದು ಅಪರಾಧ. ಈ ಹಿನ್ನೆಲೆ ಎಲ್ಲಾದರೂ ಗಿಣಿಶಾಸ್ತ್ರ, ಕರಡಿ ಮುಂತಾದ ಜೀವಿಗಳನ್ನು ಬಂಧಿಸಿರುವುದು ಕಂಡುಬಂದಲ್ಲಿ ಸಾರ್ವಜನಿಕರು ತಮ್ಮ ಸ್ಥಳೀಯ ಅರಣ್ಯ ಇಲಾಖೆ ಅಥವಾ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಹಾಗೂ ಅವುಗಳನ್ನು ರಕ್ಷಿಸಬೇಕು" ಎಂದು ಎನ್ಇಸಿಎಫ್ ಮನವಿ ಮಾಡಿದೆ.