ಶಿರ್ವ, ಆ 16: ಸೌದಿಯ ಅಲ್ ಮಿಕ್ವಾ ಆಸ್ಪತ್ರೆಯಲ್ಲಿ ನರ್ಸ್ ಹೆಝಲ್ ಆತ್ಮಹತ್ಯೆಗೈದು 27 ದಿನಗಳು ಕಳೆದಿದ್ದು, ದುಃಖದ ಮಡುವಿನಲ್ಲಿರುವ ಅವರ ಅನಾರೋಗ್ಯ ಪೀಡಿತ ತಂದೆ ತಾಯಿ , ಪತಿ ಕುಟುಂಬದ ಸದಸ್ಯರು ಆಕೆಯ ಅಂತಿಮ ದರ್ಶನಕ್ಕಾಗಿ ಇನ್ನೆಷ್ಟು ದಿನ ಕಾಯಬೇಕು ಎಂದು ಪರಿತಪಿಸುತ್ತಿದ್ದಾರೆ. ಸಾವನಪ್ಪಿದ್ದ ಮಗಳ ಮುಖವನ್ನು ಕೊನೆಯ ಬಾರಿ ನೋಡಲು ಕಾತರಿಸುತ್ತಿರುವ ನಮ್ಮ ನೋವು ಯಾರಿಗೂ ಅರ್ಥವಾಗದು ಎಂದು ಹೆಝಲ್ ತಂದೆ ಕುತ್ಯಾರು ಅಗರ್ ಬಂಡೆ ನಿವಾಸಿ ರೋಬರ್ಟ್ ಕ್ವಾಡ್ರಸ್ ಕಣ್ಣೀರಿಡುತ್ತಿದ್ದಾರೆ.
ನರ್ಸ್ ಸಾವಿಗೆ ಕಾರಣ ಎನ್ನಲಾದ ಸೌದಿ ಪ್ರಜೆಯನ್ನು ಅಲ್ಲಿನ ಪೊಲೀಸರು, ವಶಕ್ಕೆ ತೆಗೆದುಕೊಂಡಿದ್ದಾರೆ. ಈವರೆಗೆ ಆತ ಪೊಲೀಸರ ವಶದಲ್ಲಿಯೇ ಇದ್ದಾನೆ. ಪ್ರಕರಣದ ತನಿಖಾ ವರದಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಪ್ರತಿಯನ್ನು ರಾಯಭಾರ ಕಚೇರಿಗೆ ನೀಡಿದ್ದಾರೆ . ನ್ಯಾಯಾಲಯದಲ್ಲಿ ವರದಿ ಮಾನ್ಯ ಆದ ಬಳಿಕ ಅದನ್ನು ರಾಯಭಾರ ಕಚೇರಿಗೆ ಸಲ್ಲಿಸಿ ಹೆಝಲ್ ಶವ ರವಾನೆ ಪ್ರಕ್ರಿಯೆ ಆರಂಭವಾಗಲಿದೆ. ವಿಮಾನ ಟಿಕೆಟ್ ಕೊಟೇಶನ್ ಪಡೆದು, ಆಕೆಯ ಸೊತ್ತುಗಳು ಹಣಕಾಸಿನ ಬಗ್ಗೆ ಲೆಕ್ಕಚಾರ ನಡೆಸಿ ತೀರ್ಪು , ತನಿಖಾ ವರದಿ ಇನ್ನಿತರ ದಾಖಲೆಗಳೊಂದಿಗೆ ಮೃತದೇಹವನ್ನು ಭಾರತಕ್ಕೆ ರವಾನಿಸಲಾಗಿತ್ತದೆ. ಈ ವಾರದ ಕೊನೆಯಲ್ಲಿ ಶವ ರವಾನೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ಇನ್ನೊಂದೆಡೆ ಹೆಝಲ್ ಸೌದಿ ಪ್ರಜೆಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾಹಿತಿ ಇದ್ದರೂ ಕೇಂದ್ರ ಸರ್ಕಾರದ ಅಧಿಕೃತರು, ಶವ ಶೀಘ್ರ ರವಾನೆ ನಿಟ್ಟಿನಲ್ಲಿ, ಹಾಗೂ ಆರೋಪಿಯ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿಲ್ಲ. ಈ ಬಗ್ಗೆ ಕುಟುಂಬದ ಸದಸ್ಯರು, ಹಿತೈಷಿಗಳು ಪ್ರಶ್ನಿಸಿದ್ದಾರೆ. ವಿದೇಶಿ ನೆಲದಲ್ಲಿ ನಡೆದ ಅನ್ಯಾಯವನ್ನು ಸರ್ಕಾರ ಪ್ರಶ್ನಿಸಿ ಕುಟುಂಬಕ್ಕ್ರ್ ಮಾಹಿತಿ ನೀಡದಿದ್ದುದೇ ಅವರ ಅಸಮಾಧಾನಕ್ಕೆ ಕಾರಣವಾಗಿದೆ.