ಬೆಳ್ತಂಗಡಿ, ಮಾ12 (DaijiworldNews/MS): ಮುಂಡಾಜೆ ಗ್ರಾಮದ ಕಾಯರ್ತೋಡಿ ರಸ್ತೆಯ ಸೀಟ್ ಬಳಿ ರಕ್ಷಿತಾರಣ್ಯ ಪ್ರದೇಶದಲ್ಲಿ ರಸ್ತೆಬದಿ 6 ಮಂಗಗಳ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಈಗಾಗಲೇ ಹಲವೆಡೆ ಮಂಗನ ಕಾಯಿಲೆಯ ಆತಂಕವಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ಒಂದು ಮರಿ ಮಂಗ ಸಹಿತ 6 ಮಂಗಗಳ ಮೃತ ದೇಹ ರಸ್ತೆ ಬದಿ ಪತ್ತೆಯಾಗಿರುವುದನ್ನು ದಾರಿಹೋಕರು ನೋಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಆರೋಗ್ಯ ಇಲಾಖೆ ಹಾಗೂ ಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸುತ್ತಮುತ್ತ ಆತಂಕ ಸೃಷ್ಟಿಯಾಗಿದೆ ಕೆಲವು ದಿನ ಹಿಂದೆಯಷ್ಟೇ ಬೆಳಾಲು ರಸ್ತೆ ಸಮೀಪ ಎರಡು ಮಂಗಗಳ ಮೃತದೇಹ ಸಿಕ್ಕಿದ್ದು, ಅದರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.
ಮಂಗಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ರಸ್ತೆಯ ಬದಿಯಲ್ಲಿ ಬಿದ್ದಿರಬಹುದಾದ ವಿಷ ಪದಾರ್ಥ ಸೇವಿಸಿವೆಯಾ, ಅಥವಾ ಕೃಷಿಗೆ ಉಪಟಳವಾಗಿ ಕೊಂದು ಎಸೆದಿರಬಹುದೇ ಅಥವಾ ಇನ್ಯಾವುದಾದರೂ ಕಾರಣ ಇರಬಹುದೇ ಎಂಬುದು ಆರೋಗ್ಯ ಇಲಾಖೆ ಪರಿಶೀಲನೆಯಿಂದಷ್ಟೆ ತಿಳಿದುಬರಬೇಕಿದೆ.