ಮಂಗಳೂರು, ಮಾ12 (DaijiworldNews/MS): 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತ್ತು ಬಿಪಿ, ಶುಗರ್ ಹೊಂದಿರುವ 45 ವರ್ಷ ಮೇಲ್ಪಟ್ಟವರೆಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಕರೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಲಸಿಕೆ ಹಾಕಲು ಇಚ್ಚಿಸುವ ಹಿರಿಯ ನಾಗರಿಕರು ನೇರವಾಗಿ ಸಂಬಂಧಪಟ್ಟ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 10 ರಿಂದ 12% ನಾಗರಿಕರಿದ್ದಾರೆ. 90 ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ವ್ಯಾಕ್ಸಿನೇಷನ್ ಬಗ್ಗೆ ಭಯ ಮತ್ತು ತಪ್ಪು ಕಲ್ಪನೆ ಇದೆ, ಅದು ನಿಜವಲ್ಲ ವ್ಯಾಕ್ಸಿನೇಷನ್ ನಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಈಗಾಗಲೇ, ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರಿಗೆ ವ್ಯಾಕ್ಸಿನೇಷನ್ ನೀಡಲಾಗುತ್ತದೆ ಆದರೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲಎಂದು ಸ್ಪಷ್ಟಪಡಿಸಿದರು.
ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕೋವಿಡ್ ಲಸಿಕೆ ಪಡೆದವರಲ್ಲಿ ದ.ಕ. ಜಿಲ್ಲೆ ರಾಜ್ಯದಲ್ಲಿ ಮುಂಚೂಣಿಯಲ್ಲಿದ್ದು, ಮೂರನೇ ಹಂತದ ಲಸಿಕೆ ಅಭಿಯಾನದಡಿ ಮಾ.11ರವರೆಗೆ 60 ವರ್ಷ ಮೇಲ್ಪಟ್ಟ 7346 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಬಿಪಿ, ಶುಗರ್ ಹೊಂದಿರುವ 45 ವರ್ಷ ಮೇಲ್ಪಟ್ಟ 59 ವರ್ಷದೊಳಗಿನ ಒಟ್ಟು 913 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಮೊದಲ ಹಂತದಲ್ಲಿ ಆರೋಗ್ಯ ಸೇವೆಯಲ್ಲಿರುವವರು 33,887 ಮಂದಿ ಪ್ರಥಮ ಡೋಸ್ ಪಡೆದುಕೊಂಡಿದ್ದರೆ, 20,374 ಮಂದಿ ಎರಡನೇಡೋಸ್ ಪಡೆದಿದ್ದಾರೆ. ಮುಂಚೂಣಿ ಸೇವೆಯಲ್ಲಿರುವವರಲ್ಲಿ 5,454 ಮಂದಿ ಪ್ರಥಮ ಡೋಸ್ ಹಾಗೂ 727 ಮಂದಿ ಎರಡನೆ ಡೋಸ್ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.
ದ.ಕ. ಜಿಲ್ಲೆಯಲ್ಲಿ ಲಸಿಕಾ ಕೇಂದ್ರಗಳಲ್ಲಿ ವಾರದ ಏಳು ದಿನವೂ ನೀಡಲು ಸಾಧ್ಯವಾಗುವಷ್ಟು ಲಸಿಕೆಗಳು ಲಭ್ಯವಿದ್ದು, 90 ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಹಾಕಲು ಬಯಸುವ ಹಿರಿಯ ನಾಗರಿಕರು ನೇರವಾಗಿ ಸಂಬಂಧಪಟ್ಟ ಲಸಿಕಾ ಕೇಂದ್ರಗಳಿಗೆ ಬೆಳಿಗ್ಗೆ 8 ರಿಂದ ರಾತ್ರಿ 9 ರ ಒಳಗಾಗಿ ತೆರಳಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ದೇವಸ್ಥಾನಗಳ ಪ್ರಧಾನ ಅರ್ಚಕರು, ಧರ್ಮದರ್ಶಿಗಳು, ಚರ್ಚ್ನ ಧರ್ಮಗುರು, ಬಿಷಪ್ ಹಾಗೂ ಮಸೀದಿಯ ಧರ್ಮಗುರುಗಳು ಕೂಡ ಲಸಿಕೆ ಹಾಕಿಸಿಕೊಂಡು ಸಾರ್ವಜನಿಕರಿಗೆ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು