ಉಡುಪಿ, ಮಾ.12 (DaijiworldNews/HR): ಟಿ.ಜೆ. ಅಬ್ರಾಹಂ ಎಂಬವರು ಪ್ರಮೋದ್ ಮಧ್ವರಾಜ್ರವರು ಸಿಂಡಿಕೇಟ್ ಬ್ಯಾಂಕ್ನಲ್ಲಿ ವಂಚನೆ ಮಾಡಿದ್ದಾರೆ, ಅದರಲ್ಲಿ ಬ್ಯಾಂಕ್ನವರೂ ಶಾಮೀಲಾಗಿದ್ದರೆ ಎನ್ನುವ ಸುಳ್ಳು ಆರೋಪವನ್ನು ಮಾಡಿ ಕೆಲವು ದಾಖಲೆಗಳನ್ನು ಕೇಳಿ ಸಿಂಡಿಕೇಟ್ ಬ್ಯಾಂಕಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ(ಸಿಪಿಐಓ) ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

ಪ್ರಮೋದ್ ಮಧ್ವರಾಜ್
ಅರ್ಜಿಯನ್ನು ಪರಿಶೀಲಿಸಿದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಬರುವುದಿಲ್ಲ ಎಂಬುದಾಗಿ ತಿಳಿಸಿದ್ದು, ಖಾಸಗಿ ಮಾಹಿತಿಯನ್ನು ಕೇಳಿರುವುದರಿಂದ ದೂರನ್ನು ವಜಾಗೊಳಿಸಲಾಗಿತ್ತು.
ಮಾಹಿತಿ ಹಕ್ಕು ಅರ್ಜಿ ವಜಾಗೊಳಿಸಿರುವುದನ್ನು ಪ್ರಶ್ನಿಸಿ, ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ ಅಬ್ರಾಹಂ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ನೀಡಿರುವ ಮಾಹಿತಿ ಸಮರ್ಪಕವಾಗಿಲ್ಲದಿರುವುದರಿಂದ ಸಂಪೂರ್ಣ ಮಾಹಿತಿ ನೀಡುವಂತೆ ಮತ್ತು ಕ್ರಮಕೈಗೊಳ್ಳುವಂತೆ ಮೇಲ್ಮನವಿ ಸಲ್ಲಿಸಿದ್ದರು.
ದೂರುದಾರರ ಅರ್ಜಿಯನ್ನು ಪರೀಶೀಲಿಸಿದ ಮೇಲ್ಮನವಿ ಪ್ರಾಧಿಕಾರವು ಕೇಂದ್ರ ಮಾಹಿತಿ ಅಧಿಕಾರಿ ನೀಡಿರುವ ಆದೇಶವು ಸರಿಯಾಗಿದ್ದು, ಬ್ಯಾಂಕಿನವರು ಈಗಾಗಲೇ ನೀಡಿದ ಮಾಹಿತಿಯಲ್ಲದೆ, ಇತರ ಖಾಸಗಿ ಮಾಹಿತಿ ನೀಡಲು ಅವಕಾಶವಿಲ್ಲ ಎನ್ನುವುದನ್ನು ಎತ್ತಿಹಿಡಿಯಿತು.
ಮೇಲ್ಮನವಿ ಪ್ರಾಧಿಕಾರದಲ್ಲಿ ಅರ್ಜಿಗೆ ಸೋಲಾದ ಬಳಿಕವೂ ದೂರುದಾರರು ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ದಾಖಲಿಸಿದ್ದರು.
ಕೇಂದ್ರ ಮಾಹಿತಿ ಆಯೋಗವು ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿ ದೂರುದಾರರು ಮತ್ತು ಮಾಹಿತಿ ಅಧಿಕಾರಿಗಳಿಂದ ಹೆಚ್ಚುವರಿ ವಿವರ ಪಡೆಯಿತು.
ಪ್ರಮೋದ್ ಮಧ್ವರಾಜ್ ಅವರು ಬ್ಯಾಂಕಿನ ಪ್ರತಿಷ್ಟಿತ ಗ್ರಾಹಕರಾಗಿದ್ದು, ಸಾಲ ಮಂಜೂರಾತಿ ನೀಡುವ ಸಂಧರ್ಭದಲ್ಲಿ ಬ್ಯಾಂಕಿನ ಕಾನೂನು ಹಾಗೂ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆ ಎಂದು ಅಧಿಕಾರಿಗಳು ಬ್ಯಾಂಕಿನ ಪರವಾಗಿ ಆಯೋಗಕ್ಕೆ ಮಾಹಿತಿ ನೀಡಿದರು. ವಿಷಯ ಪರಾಮರ್ಷೆ ನಡೆಸಿದ ಮಾಹಿತಿ ಆಯೋಗವು ಅಬ್ರಾಹಂ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ, ದೂರುದಾರರು ನೀಡಿರುವ ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯಾಗಿರದೇ ಖಾಸಗಿ ಮಾಹಿತಿ ಕೇಳಿದ್ದಾರೆ. ಖಾಸಗಿ ಮಾಹಿತಿ ಬಹಿರಂಗಪಡಿಸಲು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿತು. ಈ ಹಿಂದೆ ನೀಡಲಾಗಿರುವ ಎರಡೂ ಆದೇಶಗಳನ್ನು ಎತ್ತಿಹಿಡಿದ ದೆಹಲಿಯ ಕೇಂದ್ರ ಮಾಹಿತಿ ಆಯೋಗವು ಟಿ. ಜೆ ಅಬ್ರಾಹಂ ನೀಡಿದ ಅರ್ಜಿಯನ್ನು ವಜಾಗೊಳಿಸಿತು.