ಮಂಗಳೂರು, ಆ16: ಕರಾವಳಿಯಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ವಿಪರೀತ ಮಳೆಗೆ, ಶಿರಾಡಿ ಘಾಟ್ ನಲ್ಲಿ ಬೃಹತ್ ಗಾತ್ರದ ಮರಗಳೊಂದಿಗೆ ಭೂ ಕುಸಿತವಾಗುತ್ತಿದ್ದು, ಅನಾಹುತಗಳು ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯಲ್ಲಿ ಇಂದಿನಿಂದ(ಆ.16ರಿಂದ) ಆ.25ವರೆಗೆ ವಾಹನಗಳ ಸಂಪೂರ್ಣ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಈ ನಿಷೇದ ಇಂದು ಬೆಳಗ್ಗೆ 6 ಗಂಟೆಯಿಂದ ಆ.25ರ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಶಿರಾಡಿ ಘಾಟ್ ನಲ್ಲಿ ಅಧಿಕ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸುತ್ತಿದ್ದು ಇದರಿಂದ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಬಹಳಷ್ಟು ತೊಂದರೆ ಅನುಭವಿಸಿದ್ದರು. ಈಗಾಗಲೇ ಭೂಕುಸಿತವಾಗಿ ಸಂಚಾರಕ್ಕೆ ತೊಡಕುಂಟಾಗಿರುವ ಮನ್ಣುಗಳನ್ನು ತೆರವುಗೊಳಿಸಲು ಹಾಗೂ ಭೂಕುಸಿತದಂತಹ ಹಾನಿ ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಈ ಹೆದ್ದಾರಿಯಲ್ಲಿ ಸಂಪೂರ್ಣವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.