ಉಳ್ಳಾಲ, ಮಾ. 12 (DaijiworldNews/SM): ಕುಂಪಲ ಆಶ್ರಯ ಕಾಲನಿ ಎಂಬಲ್ಲಿ ಬುಧವಾರ ಕಾಲೇಜು ವಿದ್ಯಾರ್ಥಿನಿ ಪ್ರೇಕ್ಷಾ(17) ಆತ್ಮಹತ್ಯೆ ಪ್ರಕರಣದ ಕುರಿತಂತೆ ಸಮಗ್ರ ತನಿಖೆಯಾಗಬೇಕು ಎಂಬುವುದಾಗಿ ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರೇಕ್ಷಾ ಕುಟುಂಬಕ್ಕೆ ನ್ಯಾಯ ನೀಡಬೇಕು. ಪೊಲೀಸ್ ಇಲಾಖೆ ಕೂಡ ಎಚ್ಚೆತ್ತು ಕಾರ್ಯ ನಿರ್ವಹಿಸಬೇಕು. ನಾರ್ಕೋಟಿಕ್ ಸೆಲ್ ಪೊಲೀಸ್ ಇಲಾಖೆಯಿಂದ ಪ್ರತ್ಯೇಕಗೊಳಿಸಬೇಕು. ಸಿಐಡಿಯಂತೆ ನಾರ್ಕೋಟಿಕ್ಸ್ ಗೂ ಪ್ರತ್ಯೇಕ ವಿಭಾಗವಾಗಬೇಕು. ಆ ಮೂಲಕ ಅಧಿಕಾರಿಗಳನ್ನು ನಾರ್ಕೋಟಿಕ್ಸ್ ವಿಭಾಗಕ್ಕೆ ಪ್ರತ್ಯೇಕವಾಗಿ ನೇಮಕಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಇದರಿಂದಾಗಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ರಾಜ್ಯದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸಿಎಂ ಬಿಎಸ್ ಯಡಿಯೂರಪ್ಪ ಮಂಡಿಸಿರುವುದು, ಆರ್ಥಿಕ ಸ್ಥಿರತೆ ಇಲ್ಲದ ಬಜೆಟ್ ಆಗಿದೆ. ಕಾಟಾಚಾರದ, ಟೊಳ್ಳು ಬಜೆಟ್ ಆಗಿದೆ. ಬಜೆಟ್ ನಲ್ಲಿ ರಾಜ್ಯದ ಯಾವುದೇ ವಿಚಾರ ಇಲ್ಲ. 71,000 ಕೋಟಿ ಸಾಲ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಒಂದೂವರೆ ವರ್ಷದಲ್ಲಿ ಒಂದೂವರೆ ಕೋಟಿ ಸಾಲದ ಸುಳಿಗೆ ರಾಜ್ಯ ಸಿಲುಕಿದೆ ಎಂದಿರುವ ಅವರು, ಕೊರತೆ ನೀಗಿಸಲು ಸಾಲ ಮಾಡುತ್ತಾ ಇದ್ದರೆ ಏನು ಲಾಭ..? ಹಿಂದುಳಿದ ವರ್ಗಗಳಿಗೆ ಯಾವುದೇ ಲಾಭ ಇಲ್ಲದ ಬಜೆಟ್ ಮಂಡಿಸಲಾಗಿದೆ. ಯಾಕೆ ಬಜೆಟ್ ನಲ್ಲಿ ತೈಲದ ಟ್ಯಾಕ್ಸ್ ಕಡಿಮೆ ಮಾಡಿಲ್ಲ ? ಎಂಬುವುದಾಗಿ ಪ್ರಶ್ನಿಸಿದ್ದಾರೆ.