ಉಳ್ಳಾಲ, ಮಾ. 12 (DaijiworldNews/SM): ಕುಂಪಲ ಆಶ್ರಯಕಾಲನಿ ನಿವಾಸಿ ವಿದ್ಯಾರ್ಥಿನಿ ಪ್ರೇಕ್ಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆಕೆಯ ತಂದೆ ಚಿತ್ತಪ್ರಸಾದ್, ಗಾಂಜಾ ವ್ಯಸನಿಗಳ ಬೆದರಿಕೆಗೆ ಹೆದರಿ ಪ್ರೇಕ್ಷಾ ಆತ್ಮಹತ್ಯೆ ನಡೆಸಿರುವುದಾಗಿ ಹೇಳಿಕೆ ನೀಡಿದ್ದಾರೆ.

ಪ್ರೇಕ್ಷಾಳ ಮನೆಗೆ ಶುಕ್ರವಾರದಂದು ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಆಕೆಯ ತಂದೆ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಶಾಲಾ ಸಂದರ್ಭ ಯುವಕನ ಜತೆಗಿದ್ದ ಫೋಟೋವನ್ನು ಇದೀಗ ವೈರಲ್ ಮಾಡಲಾಗುತ್ತಿದೆ. ಗಾಂಜಾ ವ್ಯಸನಿಗಳ ಜತೆಗಿರುವ ಯುವಕ, ಆತ ಮತ್ತು ಆತನ ತಂಡದ ಬೆದರಿಕೆಗೆ ಹೆದರಿ ಪ್ರೇಕ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿಗೆ ತೆರಳಲು ಪೋಷಕರಾಗಿ ನಾವು ವಿರೋಧಿಸಿರಲಿಲ್ಲ. ಸಾಯುವ ಮುನ್ನ ಮನೆಯ ರ್ಯಾಕ್ ನಲ್ಲಿ ಮೊಬೈಲ್ ಪತ್ತೆಯಾಗಿದೆ. ಅದರಲ್ಲಿ ಆತ್ಮಹತ್ಯೆ ಕಾರಣ ಹೇಳಿ ಲೈವ್ ವೀಡಿಯೋ ಮಾಡಿ ಕೃತ್ಯ ಎಸಗಿದ್ದಾಳೆ. ಆ ವೀಡಿಯೋ ಪರಿಶೀಲಿಸಿದಲ್ಲಿ ಆತ್ಮಹತ್ಯೆ ಕಾರಣ ಗೊತ್ತಾಗಲಿದೆ ಎಂದು ಆಕೆಯ ತಂದೆ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ ಮುಖಂಡ ಸತೀಶ್ ಕುಂಪಲ ಮೇಲು ಗಾಂಜಾ ಗ್ಯಾಂಗ್ ಅಟ್ಯಾಕ್:
ಆಶ್ರಯಕಾಲನಿಯಲ್ಲಿ ಅವ್ಯಾಹತವಾಗಿ ಗಾಂಜಾ ವ್ಯಸನಿಗಳು ತಿರುಗುತ್ತಿದ್ದು, ಮೂವರು ಯುವಕರು ಮನೆಗೆ ಬಂದಿರುವ ಮಾಹಿತಿ ನೀಡಿರುವ ಅಂಗಡಿ ಮಾಲೀಕರಿಗೂ ಜೀವಬೆದರಿಕೆ ಒಡ್ಡಲಾಗಿದೆ. ಬಿಜೆಪಿ ಮುಖಂಡ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂಪಲ ಮೇಲೂ ಗಾಂಜಾ ಗ್ಯಾಂಗ್ ಅಟ್ಯಾಕ್ ಮಾಡಿದೆ. ಈ ಹಿಂದೆ ಗಾಂಜಾ ವಿರುದ್ಧ ಧ್ವನಿ ಎತ್ತಿದ್ದ ಸಂದರ್ಭ ಅಟ್ಯಾಕ್ ನಡೆಸಿದ್ದರೆಂದು ಸಚಿವರಲ್ಲಿ ದೂರಿಕೊಂಡ ಸತೀಶ್ ಕುಂಪಲ ಆರೋಪಿಸಿದ್ದಾರೆ.
ಈ ನಡುವೆ ಗಾಂಜಾ ವ್ಯಸನಿಗಳಿಂದ ಪ್ರೇಕ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದ ಮೋಹನ್ ಶೆಟ್ಟಿ ಮನೆಗೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನು ಹಾನಿಗೊಳಿಸಿದ್ದಾರೆ.