ಆ,16: ಕಂಡು ಕೇಳರಿಯದ ಜಲಪ್ರಳಯಕ್ಕೆ ದೇವರನಾಡು ಕೇರಳ ತತ್ತರಿಸಿದ್ದು, ಈವರೆಗೆ ಮಳೆ, ಭೂಕುಸಿತ, ಪ್ರವಾಹ, ನೆರೆ ಮುಂತಾಗಿ ಸಂಭವಿಸಿರುವ ದುರಂತಗಳಿಗೆ ಬಲಿಯಾದವರ ಸಂಖ್ಯೆ 79ಕ್ಕೇರಿದೆ. ಆಗಸ್ಟ್ 16 ರ ಗುರುವಾರ ಒಂದೇ ದಿನ ಪ್ರವಾಹಕ್ಕೆ 12 ಜೀವ ಬಲಿಯಾಗಿ ಎಂದು ವರದಿಯಾಗಿದೆ.
ಕಳೆದ ಆಗಸ್ಟ್ 8ರಿಂದ ರಾಜ್ಯದಲ್ಲಿ ಆರಂಭಗೊಂಡಿದ್ದ ಭಾರಿ ಮಳೆ ಇನ್ನೂ ಮುಂದುವರಿದಿದ್ದು ಈ ಪರಿಸ್ಥಿತಿ ಶನಿವಾರದ ತನಕವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಡುವೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸಿದ್ದವಾಗಿರುವಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಪ್ರಧಾನಿ ಮೋದಿ ಅವರಿಗೆ ಫೋನಿನಲ್ಲಿ ಕೇರಳದ ಸ್ಥಿತಿಗತಿಯನ್ನು ವಿವರಿಸಿದ್ದಾರೆ.ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ, ಪರಿಹಾರ ಒದಗಿಸುವಿಕೆಯನ್ನು ಚುರುಕುಗೊಳಿಸುವಂತೆ ರಕ್ಷಣಾ ಸಚಿವಾಲಯಕ್ಕೆ ಸೂಚಿಸಿದ್ದು, ಕೇರಳ ಜನರ ಸುರಕ್ಷೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ನಿರಂತರ ಜಡಿ ಮಳೆ, ಪ್ರವಾಹ, ಭೂಕುಸಿತದಿಂದ ತತ್ತರಿಸುತ್ತಿರುವ ಕೇರಳದ ಎಲ್ಲ 14 ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು ಪರಿಸ್ಥಿತಿ ಗಂಭೀರವಿದ್ದು, 50,000ಕ್ಕೂ ಹೆಚ್ಚು ಜನ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ.