ಮಂಗಳೂರು, ಮಾ.13 (DaijiworldNews/MB): ''ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರೋಗಲಕ್ಷಣವಿದ್ದು ಗಡಿ ದಾಟುವವರ ಬಗ್ಗೆ ಜಾಗರೂಕರಾಗಿರಲು ಮಾರ್ಚ್ 13 ರ ಶನಿವಾರದಿಂದ ಜಾರಿಗೆ ಬರುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ಪೋರ್ಸ್ ಸಮಿತಿ ರಚಿಸಲು ನಿರ್ಧರಿಸಲಾಗಿದೆ'' ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಹೇಳಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ''ಅಧಿಕೃತ ಮಟ್ಟದ ಸಭೆಯಲ್ಲಿ ಗ್ರಾಮ ಮಟ್ಟದಲ್ಲಿ ಟಾಸ್ಕ್ಪೋರ್ಸ್ ಸಮಿತಿಗಳನ್ನು ರಚಿಸಲು ಸೂಚನೆಗಳನ್ನು ನೀಡಲಾಗಿದೆ ಪ್ರದೇಶದಲ್ಲಿ ಗಸ್ತು ತಿರುಗಲು ಈ ಸಮಿತಿಗಳಿಗೆ ತಿಳಿಸಲಾಗಿದೆ. ಕೇರಳದಲ್ಲಿ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆ ಗಡಿಯಲ್ಲಿ ಸುರಕ್ಷತೆ ಅತೀ ಮುಖ್ಯ'' ಎಂದು ಅವರು ಹೇಳಿದರು.
"ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವವರು ಕೊರೊನಾ ನೆಗೆಟಿವ್ ವರದಿ ತರಬೇಕು. ಅವರು ಗಡಿಗಳಿಗೆ ಬಂದು ಅಲ್ಲಿ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಪಡಬಹುದು. ಗಡಿ ದಾಟಲು ಯಾವುದೇ ತಡೆ ಇಲ್ಲದಿದ್ದರೂ, ತಪಾಸಣೆ ನಡೆಸಲಾಗುತ್ತಿದೆ. ಕೇರಳದ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದರು, ಉಭಯ ಜಿಲ್ಲೆಗಳ ದೈನಂದಿನ ಸಂಚಾರ ನಡೆಸುವವರ ಹಿತದೃಷ್ಟಿಯಿಂದ ಇನ್ನೂ ನಾಲ್ಕು ಗಡಿ ರಸ್ತೆಗಳನ್ನು ತೆರೆಯಲು ನಿರ್ಧರಿಸಲಾಗಿದೆ'' ಎಂದು ಕೂಡಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
''ದೈನಂದಿನ ಕೊರೊನಾ ಪರೀಕ್ಷೆಗಳ ಸಂಖ್ಯೆ 4,000 ಕ್ಕೆ ಏರಿದೆ. ಈ ಹಿನ್ನೆಲೆ ವೆನ್ಲಾಕ್ ಆಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಮತ್ತು ಲ್ಯಾಬ್ ತಂತ್ರಜ್ಞರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಇಲ್ಲಿರುವ ವಿಮಾನ ನಿಲ್ದಾಣದಲ್ಲಿ ಸ್ವ್ಯಾಬ್ ಪರೀಕ್ಷಾ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು ಅದು 24 ಗಂಟೆಗಳಲ್ಲೂ ವರದಿ ನೀಡುತ್ತದೆ. ಕೇರಳ ಪ್ರಯಾಣಿಕರಿಗೆ ಇದು ಸಹಕಾರಿಯಾಗಲಿದೆ'' ಎಂದರು.