ಹರಿಪ್ರಸಾದ್ ನಂದಳಿಕೆ,ಬೆಳ್ಮಣ್.
ಬೆಳ್ಮಣ್, ಮಾ 13 (DaijiworldNews/MS): ಪ್ರತೀ ವರ್ಷವೂ ಒಂದಲ್ಲ ಒಂದು ರೀತಿಯಲ್ಲಿ ಅದ್ಬುತ ಪ್ರಚಾರದ ಪರಿಕಲ್ಪನೆಯನ್ನು ಹೊತ್ತುಕೊಂಡು ವಿಭಿನ್ನ ರೀತಿಯಲ್ಲಿ ಜಾತ್ರೆಯ ಪ್ರಚಾರವನ್ನು ಮಾಡುವ ನಂದಳಿಕೆ ಸಿರಿ ಜಾತ್ರೆ ಈ ಬಾರಿ ಮಾಸ್ಕ್ ಮೂಲಕ ಪ್ರಚಾರಕ್ಕೆ ಇಳಿದಿದೆ.

ವಿಶ್ವದೆಲ್ಲೆಡೆ ಕರೋನ ಮಹಾಮಾರಿಯಿಂದ ಜನ ಬೇಸೆತ್ತು ಹೋಗಿದ್ದು. ಜನರಲ್ಲಿ ಕರೋನಾ ಮಹಾಮಾರಿಯ ಬಗ್ಗೆ ಆತಂಕ ಭಯ ಇದ್ದು ಈ ಹಿನ್ನಲೆಯಲ್ಲಿ ಕರೋನದ ಬಗ್ಗೆಯೂ ಜಾಗೃತರಾಗುವಂತೆ ಮಾಸ್ಕ್ನ ಮೂಲಕ ವಿಶೇಷ ಪರಿಕಲ್ಪನೆಯ ಪ್ರಚಾರಕ್ಕೆ ಇಳಿದಿದೆ ನಂದಳಿಕೆ ಜಾತ್ರೆ.
ಈ ಹಿಂದೆ ಅಂಚೆ ಕಾರ್ಡ್, ಮಾವಿನ ಎಲೆ, ಛತ್ರಿ, ಗೋಣಿಚೀಲ ಹಾಗೂ ಮೈಲಿಗಲ್ಲಿನ ಪ್ರಚಾರದ ಮೂಲಕ ಎಲ್ಲರ ಮನಗೆದ್ದ ನಂದಳಿಕೆ ಸಿರಿ ಜಾತ್ರೆಗೆ ಈ ಬಾರಿ ಮಾಸ್ಕ್ ಪ್ರಚಾರ ಬಾರಿ ಪ್ರಶಂಶೆಯನ್ನು ತಂದುಕೊಡುತ್ತಿದೆ. ಮಾಸ್ಕ್ ಪ್ರಚಾರದ ಜೊತೆಯಲ್ಲಿ ಅಲ್ಲಲ್ಲಿ ಮೈಲಿಗಲ್ಲುಗಳು ಕೂಡ ಈ ಬಾರಿಯ ಸಿರಿಜಾತ್ರೆಗೆ ಪ್ರಚಾರವನ್ನು ನೀಡಲಿದೆ. ಮಾಸ್ಕ್ನ ಒಂದು ಬದಿಯಲ್ಲಿ ನಂದಳಿಕೆ ಸಿರಿ ಜಾತ್ರೆ ಎಂದು ಬರೆದಿದ್ದು ಇನ್ನೊಂದು ಬದಿಯಲ್ಲಿ ಜಾತ್ರೆಯ ದಿನಾಂಕವನ್ನು ನಮೂದಿಸಲಾಗಿದೆ. ಕ್ಷೇತ್ರದಲ್ಲಿ ಸೇವೆಯನ್ನು ನೀಡುವ ಎಲ್ಲಾ ಸ್ವಯಂ ಸೇವಕರ ಮುಖದಲ್ಲಿ ಈ ಬಾರಿ ಸಿರಿಜಾತ್ರೆಯ ಮಾಸ್ಕ್ ವಿಶೇಷ ಮೆರುಗನ್ನು ನೀಡಲಿದೆ. ಈಗಾಗಲೇ 1000 ಸಾವಿರ ಮಾಸ್ಕ್ನ್ನು ಸಿದ್ದಪಡಿಸಲಾಗಿದೆ.
ಕಳೆದ ಬಾರಿಯೂ ಕರೋನದಿಂದ ಸಿರಿ ಜಾತ್ರೆಯೂ ರದ್ದುಗೊಂಡಿದ್ದು ಈ ಬಾರಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು ಬರುವ ಭಕ್ತರಿಗೆ ಸಕಳ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರ ತಂಡ ಸಿದ್ದತೆಗಳನ್ನು ನಡೆಸುತ್ತಿದೆ. ಈಗಾಗಲೇ ನಂದಳಿಕೆ ಜಾತ್ರೆಯ ಶಿಸ್ತು ಪಾಲನೆಗಾಗಿ ಸುಮಾರು 1000 ಕ್ಕೂ ಅಧಿಕ ಸ್ವಯಂ ಸೇವಕರ ತಂಡ ಸಿದ್ದಗೊಂಡಿದ್ದು ಸಿರಿಜಾತ್ರೆಗಾಗಿ ದುಡಿಯುತ್ತಿದೆ. ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಈ ಬಾರಿಯ ಸಿರಿ ಜಾತ್ರೆ ನಡೆಯಲಿದೆ. ಭಕ್ತರು ಗುಂಪುಗೂಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಕಲಾತಂಡಗಳ ಸಾಂಸ್ಕೃತಿಕ ಮೆರುಗು ನೀಡಲಿದೆ.
ಕಾರ್ಕಳ ತಾಲೂಕಿನ ನಂದಳಿಕೆ ಸಿರಿ ಜಾತ್ರೆ ಎಂದರೆ ಇಡೀ ನಾಡಿಗೆ ನಡೆ ಸಂಭ್ರಮ , ಆದಿ ಆಲಡೆ, ಸಿರಿ ಕ್ಷೇತ್ರ, ಸಿರಿಗಳ ಮೂಲ ಕ್ಷೇತ್ರ, ನಾಲ್ಕು ಸ್ಥಾನ ನಂದಳಿಕೆ ಹೀಗೆ ನಾನಾ ರೀತಿಯಿಂದಲೂ ಗುರುತಿಸಿಕೊಂಡ ನಂದಳಿಕೆ ಮಹಾಲಿಂಗೇಶ್ವರನ ದೇವಾಲಯದ ಜಾತ್ರೆಯು ಪ್ರತೀ ಬಾರಿ ಹೊಸತನದ ಪ್ರಚಾರದ ಪರಿಕಲ್ಪನೆಯನ್ನು ಹೊತ್ತು ಶಾಭಷ್ ಗಿರಿ ಪಡೆಯುತ್ತಿದೆ. ಪ್ರತೀ ವರ್ಷ ವಿಭಿನ್ನ ಪರಿಕಲ್ಪನೆಯ ಪ್ರಚಾರ ಫಲಕದ ರೂವಾರಿ ನಂದಳಿಕೆ ಚಾವಡಿ ಅರಮನೆ ನಂದಳಿಕೆ ಸುಹಾಸ್ ಹೆಗ್ಡೆ. ಮೈಲಿಗಲ್ಲುಗಳು ಈ ಬಾರಿ ದ.ಕನ್ನಡ ಹಾಗು ಉಡುಪಿ ಜಿಲ್ಲೆಯೆಲ್ಲೆಡೆ ರಸ್ತೆಯ ಬದಿಯಲ್ಲಿ ಪ್ರಯಾಣಿಕರ ಮನ ಸೆಳೆಯಲಿದೆ. ಧರ್ಮಸ್ಥಳ, ಚಾರ್ಮಾಡಿ , ಉಜಿರೆ , ಬಂಟ್ವಾಳ, ಉಡುಪಿ , ಕುಂದಾಪುರ ಮಲೆನಾಡಿನಲ್ಲೂ ಪ್ರಚಾರಫಲಕ ಕಂಗೊಳಿಸಲಿದೆ.
ಮಾರ್ಚ್.28 ರಂದು ಸಿರಿಜಾತ್ರೆ ನಡೆಯಲಿದ್ದು ಕ್ಷೇತ್ರದಲ್ಲಿ ಪೂರ್ವ ತಯಾರಿಗಳು ನಡೆಯುತ್ತಿದೆ. ಈ ಬಾರಿಯ ಪ್ರಚಾರ ಫಲಕದ ಬಿಡುಗಡೆ ಕಾರ್ಯಕ್ರಮ ಗುರುವಾರ ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭ ಕ್ಷೇತ್ರದ ಪ್ರಧಾನ ಅರ್ಚಕ ಹರೀಶ್ ತಂತ್ರಿ , ವ್ಯವಸ್ಥಾಪಕ ರವಿರಾಜ್ ಭಟ್, ಉದಯ್ ಕುಮಾರ್, ಅರುಣ್ ಭಂಡಾರಿ ಮತ್ತಿತರಿದ್ದರು.
ಆರೋಗ್ಯದ ಬಗ್ಗೆ ಕಾಳಜಿಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಬಾರಿಯ ಪ್ರಚಾರಕ್ಕೆ ಮಾಸ್ಕ್ನ್ನು ಸಿದ್ದಪಡಿಸಲಾಗಿದೆ. ಕೋವಿಡ್ ನಿಯಾಮಾವಳಿಯನ್ನು ಅನುಸರಿಸಿ ಸಿರಿ ಜಾತ್ರೆ ನಡೆಯಲಿದೆ. ಮಾಸ್ಕ್ ಪ್ರಚಾರದ ಜೊತೆಗೆ ಮೈಲಿಗಲ್ಲುಗಳು ಕೂಡ ಸಿರಿಜಾತ್ರೆಗೆ ಪ್ರಚಾರವನ್ನು ನೀಡಲಿದೆ.
- ಯನ್.ಸುಹಾಸ್ ಹೆಗ್ಡೆ, ನಂದಳಿಕೆ ಚಾವಡಿ ಅರಮನೆ.
ಕಳೆದ ಬಾರಿಯೂ ಜಾತ್ರೆ ನಡೆಯದ ಹಿನ್ನಲೆಯಲ್ಲಿ ಈ ಬಾರಿ ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಬರುವ ಭಕ್ತರಿಗೆ ಸಕಳ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರ ತಂಡ ವಿಶೇಷವಾಗಿ ಶ್ರಮಿಸುತ್ತಿದೆ.
- ಹರೀಶ್ ತಂತ್ರಿ , ಪ್ರಧಾನ ಅರ್ಚಕರು.
ಭಕ್ತರು ಒಂದೇ ಕಡೆಯಲ್ಲಿ ಗುಂಪುಗೂಡುವುದನ್ನು ತಪ್ಪಿಸಲು , ಅಲ್ಲಲ್ಲಿ ಸಾಂಸ್ಕೃತಿಕ ಕಲಾತಂಡಗಳಿಂದ ಕಲಾಪ್ರದರ್ಶನ ನಡೆಯಲಿದೆ.
- ರವಿರಾಜ್ ಭಟ್, ವ್ಯವಸ್ಥಾಪಕರು