ಉಪ್ಪಿನಂಗಡಿ, ಮಾ.13 (DaijiworldNews/PY): ಡೀಸೆಲ್ ತುಂಬಿದ ಟ್ಯಾಂಕರ್ವೊಂದು ಗಾಲಿ ಕಳಚಿದ ಕಾರಣ ಮಗುಚಿ ಬಿದ್ದ ಘಟನೆ ಮಾ.13ರ ಶನಿವಾರದಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ 34ನೇ ನೆಕ್ಕಿಲಾಡಿಯ ಬೊಳ್ಳಾರು ಎಂಬಲ್ಲಿ ನಡೆದಿದೆ.

ಟ್ಯಾಂಕರ್ ಮಗುಚಿ ಬಿದ್ದ ಕಾರಣ ಟ್ಯಾಂಕರ್ ಚಾಲಕ ಮಹೇಶ್ಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.
ಟ್ಯಾಂಕರ್ ಮಂಗಳೂರಿನಿಂದ ಕೋಲಾರಕ್ಕೆ ತೆರಳುತ್ತಿದ್ದ ಸಂದರ್ಭ ಬೊಳ್ಳಾರು ಸಮೀಪ ಗಾಲಿಗಳೆರಡು ಕಳಚಿಕೊಂಡಿದ್ದರಿಂದ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಟ್ರಾಫ್ಕ್ ಜಾಮ್ ಉಂಟಾಗಿದೆ.
ಟ್ಯಾಂಕರ್ ಮಗುಚಿ ಬಿದ್ದು ಅರ್ಧ ಗಂಟೆಯಾದರೂ ಕೂಡಾ ಸ್ಥಳಕ್ಕೆ ಪೊಲೀಸರು ಬಾರದ ಕಾರಣ ಸ್ಥಳೀಯರು ಹಾಗೂ ವಾಹನ ಚಾಲಕರು ಡೀಸೆಲ್ ತುಂಬಿಸಲು ಆರಂಭಿಸಿದ್ದು, ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಬಳಿಕ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಲಘು ಲಾಠಿ ಪ್ರಹಾರ ನಡೆಸಿದ್ದು, ಗುಂಪನ್ನು ಚದುರಿಸಿದ್ದಾರೆ.