ಉಡುಪಿ, ಮಾ.13 (DaijiworldNews/MB): ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಅಂಗಡಿಯ ಸಿಬ್ಬಂದಿ ನಡುರಸ್ತೆಯಲ್ಲೇ ಪೌರಕಾರ್ಮಿಕರೊರ್ವರಿಗೆ ಹಲ್ಲೆ ಮಾಡಿದ ಘಟನೆ ಮಾರ್ಚ್ 12ರ ಶುಕ್ರವಾರದ ನಡೆದಿದ್ದು ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರು ಹಾಗೂ ಅಂಗಡಿಯ ಮಾಲಿಕರೂ ಆಗಿರುವ ದಾವೂದ್ ಅಬೂಬಕರ್ ಕ್ಷಮೆ ಯಾಚಿಸಿದ್ದಾರೆ.


ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಮೂಲಕ ಕ್ಷಮೆಯಾಚಿಸಿರುವ ಅವರು, ''ನನ್ನ ಅಸ್ಮಾ ಎಲೆಕ್ಟ್ರಾನಿಕ್ಸ್ ಅಂಗಡಿಯ ಉದ್ಯೋಗಿಯೊಬ್ಬರು ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿದ ಅಮಾನವೀಯ ಘಟನೆ ನನ್ನ ಗಮನಕ್ಕೆ ಬಂದಿದ್ದು ಅದಕ್ಕೆ ಕ್ಷಮೆ ನಾನು ಯಾಚಿಸುತ್ತೇನೆ. ಇದು ಅಕ್ಷಮ್ಯ ಅಪರಾಧವಾಗಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನಾನು ದೇಶದ ಕಾನೂನನ್ನು ಗೌರವಿಸುವವನಾಗಿದ್ದು ಯಾವುದೇ ವ್ಯಕ್ತಿಯೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಹಾಗಾಗಿ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡುತ್ತೇನೆ'' ಎಂದು ತಿಳಿಸಿದ್ದಾರೆ.
ಕಸಗಳನ್ನು ವಿಂಗಡಿಸಿ ಕೊಡಬೇಕು ಎನ್ನುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಪೌರ ಕಾರ್ಮಿಕ ವಾಹನ ಚಾಲಕನಾದ ಸಂಜೀವ್ ಮಾದರ್ ಮೇಲೆ ಎಲೆಕ್ಟ್ರಾನಿಕ್ ಅಂಗಡಿ ಸಿಬ್ಬಂದಿ ಸಾರ್ವಜನಿಕವಾಗಿ ಹಲ್ಲೆ ಮಾಡಿ ಬೆದರಿಸಿದ್ದು ಈ ಕುರಿತಾದ ವೀಡಿಯೋ ವೈರಲ್ ಆಗಿದೆ. ಉಡುಪಿ ನಗರಸಭೆಯಲ್ಲಿ ಹಸಿ, ಒಣ ಮತ್ತು ಪ್ಲಾಸ್ಟಿಕ್ ಕಸವನ್ನು ವಿಂಗಡಿಸಿಕೊಡಬೇಕು. ಆದರೆ ಎಲೆಕ್ಟ್ರಾನಿಕ್ ಅಂಗಡಿಯವರು ಎಲ್ಲವನ್ನು ಒಂದೇ ಚೀಲಕ್ಕೆ ಹಾಕಿ ಕೊಟ್ಟಿದ್ದನ್ನು ಚಾಲಕ ಪ್ರಶ್ನಿಸಿದ್ದಕ್ಕೆ, ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಕೂತಿದ್ದ ಆತನನ್ನು ಕಾಲರ್ ಪಟ್ಟಿ ಹಿಡಿದು ಹೊರಗೆಳೆದು ಕೆನ್ನೆಗೆ ಅಂಗಡಿಯ ಸಿಬ್ಬಂದಿ ಹೊಡೆದಿದ್ದಾನೆ.