ಉಡುಪಿ, ಮಾ.13 (DaijiworldNews/HR): "ಶ್ರೀ ಕೃಷ್ಣ ಮಠಕ್ಕೆ ಪ್ರತಿನಿತ್ಯ ಬರುವ ಭಕ್ತರಿಗಾಗಿ ಸುದರ್ಶನ ಪಾಸ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಯಾವುದೇ ನಿಗದಿತ ಸಮಯಾವಧಿ ಇರುವುದಿಲ್ಲ. ವಿಐಪಿ ಪಾಸ್ ಕೂಡ ಲಭ್ಯವಿದ್ದು, ಪ್ರವಾಸಿಗಳಿಗೆ ಯಾವುದೇ ಪಾಸ್ ವ್ಯವಸ್ಥೆ ಇಲ್ಲ. ಪ್ರತಿನಿತ್ಯ 12000-13000 ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತಿದೆ. ಭದ್ರತಾ ದೃಷ್ಟಿಯಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ" ಎಂದು ಪರ್ಯಾಯ ಶ್ರೀ ಅದಮಾರು ಮಠದ ವ್ಯವಸ್ಥಾಪಕರಾದ ಗೋವಿಂದರಾಜು ತಿಳಿಸಿದರು.

ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯಾವಧಿಯಲ್ಲಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ಪುನರುತ್ಥಾನದ ಕೆಲಸ-ಕಾರ್ಯಗಳು ನಡೆಯುತ್ತಿವೆ. ಶ್ರೀಕೃಷ್ಣ ಮಠದಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತುಕೊಟ್ಟು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಅವರು ಶನಿವಾರ ಕೃಷ್ಣ ಮಠದ ಕನಕಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶ್ರೀ ಮಠದ ಪೈಂಟಿಂಗ್, ಎಲೆಕ್ಟ್ರಿಕಲ್ ಹಾಗೂ ಇತರ ಕಾಮಗಾರಿಯ ಒಟ್ಟು ಖರ್ಚು ರೂ. 31.88 ಲಕ್ಷ ಆಗಿರುತ್ತದೆ. ವಿಶ್ವಪಥ-ಯಾತ್ರಾರ್ಥಿಗಳ ಸರಣಿ ದರ್ಶನದ ಹಾದಿಗಾಗಿ ರೂ. 52.63 ಲಕ್ಷ ಖರ್ಚು ಮಾಡಲಾಗಿದೆ. ಸರೋವರದ ಎದುರು ಭಾಗದ ಮಾಡಿನ ನವೀಕರಣದ ಅಂದಾಜು ಖರ್ಚು - ರೂ. 15.00 ಲಕ್ಷ ಮತ್ತು ಮಧ್ವ ಸರೋವರದ ಮಧ್ಯಭಾಗದ ಮಧ್ವ ಗುಡಿಯ ನವೀಕರಣವನ್ನು ರೂ. 20.00 ಲಕ್ಷ ಅಂದಾಜು ವೆಚ್ಚದಲ್ಲಿ ಮಾಡಲಾಗುತ್ತಿದೆ, ಇಷ್ಟೇ ಅಲ್ಲದೆ ಸ್ವರ್ಣ ಛತ್ರವನ್ನು ನಿರ್ಮಿಸಲಾಗಿದೆ ಎಂದು ಆಡಳಿತ ವ್ಯವಸ್ಥಾಪಕರಾದ ಗೋವಿಂದ ರಾಜು ತಿಳಿಸಿದರು.
ಸಭೆಯಲ್ಲಿ, ಮಾಧವ ಉಪಾಧ, ರಾಮಚಂದ್ರ ರಾವ್, ಪ್ರದೀಪ್ ರಾವ್, ರೋಹಿತ್ ತಂತ್ರಿ, ರಮೇಶ್ ಉಪಸ್ಥಿತರಿದ್ದರು.