ನವದೆಹಲಿ, ಆ.17: ಅಜಾತಶತ್ರು ಎಂದೇ ವಿಖ್ಯಾತರಾಗಿದ್ದ, ದೇಶ ಕಂಡ ಅಪ್ರತಿಮ ರಾಜಕಾರಣಿ, ಮಾಜಿ ಪ್ರಧಾನಿ ವಾಜಪೇಯಿ ಅಗಲಿಕೆಯೊಂದಿಗೆ ದೇಶದಲ್ಲಿ ಒಂದು ಯುಗಾಂತ್ಯವಾಗಿದೆ.
ಮಾಜಿ ಪ್ರಧಾನಮಂತ್ರಿಯ ಅಂತಿಮ ದರ್ಶನಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆವರೆಗೆ ದೆಹಲಿಯ 6ಎ ಕೃಷ್ಣಮೆನನ್ ಮಾರ್ಗ್ನಲ್ಲಿರುವ ವಾಜಪೇಯಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಬಂಧು ಮಿತ್ರರಿಗೆ ಮತ್ತು ಗಣ್ಯರಿಗೆ ದರ್ಶನ ಪಡೆಯಲು ಅವಕಾಶವಿದ್ದು, ನಂತರ 9 ಗಂಟೆಗೆ ಕೃಷ್ಣಮೆನನ್ ಮಾರ್ಗ್ನ ನಿವಾಸದಿಂದ ಪಾರ್ಥಿವ ಶರೀರದ ಮೆರವಣಿಗೆ ಹೊರಡಲಿದೆ. ಬಳಿಕ ಪಾರ್ಥಿವ ಶರೀರ 5 ಕಿಲೋಮೀಟರ್ ದೂರದ ಬಿಜೆಪಿ ಮುಖ್ಯ ಕಚೇರಿಗೆ ತಲುಪಲಿದೆ.
ಸುಮಾರು 2 ಗಂಟೆವರೆಗೆ ಕೃಷ್ಣಮೆನನ್ ಮಾರ್ಗ್ನ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ. ಬಳಿಕ 9 ಕಿಲೋಮೀಟರ್ ದೂರದ ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ.
ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತ ಪಡಿಸಿರುವ ಕೇಂದ್ರ ಸರ್ಕಾರ ಆಗಸ್ಟ್ 16 ರಿಂದ 22 ರ ವರೆಗೆ ದೇಶಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದ್ದು, ರಾಷ್ಟ್ರ ಧ್ವಜವನ್ನು 7 ದಿನಗಳ ಕಾಲ ದೇಶಾದ್ಯಂತ ಅರ್ಧ ಮಟ್ಟಕ್ಕೆ ಹಾರಿಸಲು ಸೂಚಿಸಿದೆ.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದ್ದು, ಶೋಕ ಸಾಗರದಲ್ಲಿ ಮುಳುಗಿದೆ.