ಉಡುಪಿ, ಮಾ.14 (DaijiworldNews/MB) : ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಅಂಗಡಿಯ ಸಿಬ್ಬಂದಿ ನಡುರಸ್ತೆಯಲ್ಲೇ ಪೌರಕಾರ್ಮಿಕರೊರ್ವರಿಗೆ ಹಲ್ಲೆ ಮಾಡಿದ ಘಟನೆ ನಡೆದ ಹಿನ್ನೆಲೆ ಪೌರ ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸುವ ಬಗ್ಗೆ ಪಾಲಿಕೆಯ ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಶಾಸಕ ರಘುಪತಿ ಭಟ್ ಅವರು ಮಾರ್ಚ್ 13 ರ ಶನಿವಾರ ನಗರಸಭೆ ಕಚೇರಿಯಲ್ಲಿ ಸಭೆ ನಡೆಸಿದರು.

ಪೌರ ಕಾರ್ಮಿಕರ ಮೇಲಿನ ಹಲ್ಲೆಯನ್ನು ಖಂಡಿಸಿದ ರಘುಪತಿ ಭಟ್ ಅವರು, ಪೌರ ಕಾರ್ಮಿಕರ ರಕ್ಷಣೆಗೆ ಆಡಳಿತ ಯಾವಾಗಲೂ ಬದ್ಧವಾಗಿದೆ ಎಂದು ಹೇಳಿದರು. ಇಂತಹ ಘಟನೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮತ್ತು ಅಪರಾಧಿಗಳ ಮೇಲೆ ಕಠಿಣ ಕ್ರಮಗಳ ಬಗ್ಗೆಯೂ ಅವರು ಚರ್ಚಿಸಿದರು.
"ನಾನು ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೆ. ಆದರೆ, ಸುದ್ದಿ ಬಂದ ಕೂಡಲೇ ನಾನು ಎಸ್ಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ" ಎಂದು ಹೇಳಿದರು.
''ಪೌರ ಕಾರ್ಮಿಕರು ಭಯವಿಲ್ಲದೆ ತಮ್ಮ ಕೆಲಸ ಮಾಡಿ'' ಎಂದು ಹೇಳಿದ ರಘುಪತಿ ಭಟ್ ಅವರು, ''ಆಡಳಿತವು ಯಾವಾಗಲೂ ಅವರೊಂದಿಗೆ ಇರುತ್ತದೆ. ನಗರವನ್ನು ಸ್ವಚ್ಛವಾಗಿಡುವಲ್ಲಿ ಪೌರ ಕಾರ್ಮಿಕರು ಮಾಡಿದ ಕಾರ್ಯ ಶ್ಲಾಘನೀಯ. ನೀವು ಸಹಕಾರ ನೀಡಬೇಕು'' ಎಂದು ವಿನಂತಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರ ಆರ್ ನಾಯಕ್, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ, ನಗರಸಭೆ ಆಯುಕ್ತ ಉದಯ್ ಶೆಟ್ಟಿ ಮತ್ತು ಕಂದಾಯ ಅಧಿಕಾರಿ ಧನಂಜಯ್ ಉಪಸ್ಥಿತರಿದ್ದರು.