ಮಂಗಳೂರು, ಮಾ.14 (DaijiworldNews/MB) : ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮುಂದಿನ 15 ದಿನಗಳವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ನಕಲಿ ಸುತ್ತೋಲೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈ ಬಗ್ಗೆ ದಾಯ್ಜಿವಲ್ಡ್ ವಾಹಿನಿಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಅವರು, ''ಸುತ್ತೋಲೆ ನಕಲಿ'' ಎಂದು ದೃಢಪಡಿಸಿದ್ದಾರೆ. ಸಾರ್ವಜನಿಕರು ಇದರ ಬಗ್ಗೆ ಗಮನ ಹರಿಸದಂತೆ ಸೂಚಿಸಿದ್ದಾರೆ.
"ನಾವು ಸರ್ಕಾರದಿಂದ ಅಂತಹ ಯಾವುದೇ ಆದೇಶಗಳನ್ನು ಅಥವಾ ಸುತ್ತೋಲೆಗಳನ್ನು ಸ್ವೀಕರಿಸಿಲ್ಲ" ಎಂದು ಡಿಸಿ ಹೇಳಿದರು.
ಒಂದು ವರ್ಷದ ಹಿಂದೆ ರಾಜ್ಯದಲ್ಲಿ ಕೊರೊನಾ ಸೋಂಕು ಪತ್ತೆಯಾದಾಗ ಸರ್ಕಾರ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚುವಂತೆ ಸುತ್ತೋಲೆ ಆದೇಶ ಹೊರಡಿಸಿತ್ತು. ಅದೇ ಸುತ್ತೋಲೆಯನ್ನು ದಿನಾಂಕಗಳ ಬದಲಾವಣೆ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮಾಹಿತಿ ಮತ್ತು ಶಿಕ್ಷಣ ಇಲಾಖೆಗಳು ಸಹ ಸುತ್ತೋಲೆ ನಕಲಿ ಎಂದು ದೃಢಪಡಿಸಿದೆ. "ಎಲ್ಲಾ ಪ್ರಾಂಶುಪಾಲರಿಗೆ ಇದು ನಕಲಿ ಪತ್ರ ಎಂದು ತಿಳಿಸಲಾಗಿದೆ. ಈ ಪ್ರಕರಣದ ಬಗ್ಗೆ ದೂರು ನೀಡಲಾಗುವುದು'' ಎಂದು ಜಿಲ್ಲಾ ಶಿಕ್ಷಣ ಇಲಾಖೆ ತಿಳಿಸಿದೆ.
"ಪತ್ರದಲ್ಲಿ ಬರಿ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ತಿಳಿದು ಬರುತ್ತದೆ. ಹಳೆಯ ದಿನಾಂಕಗಳನ್ನು ಬದಲಾಯಿಸಿ ಪೋಸ್ಟ್ ಮಾಡಲಾಗಿದೆ. ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಇದು ನಕಲಿ ಸಂದೇಶ'' ಎಂದು ಹೇಳಿದೆ.