ಮೂಡುಬಿದಿರೆ, ಮಾ.14 (DaijiworldNews/PY): ಮೂವರು ಮಕ್ಕಳು ಸೇರಿದಂತೆ ಕುಟುಂಬದ ಐವರು ಸದಸ್ಯರು ನಾಪತ್ತೆಯಾದ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಂಜೆಯಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ಕರಿಂಜೆಯ ಸ್ವರ್ಣನಗರದ ನಿವಾಸಿಗಳಾದ ಜ್ಯೋತಿ ಮಣಿ (36), ಮನೋರಂಜಿತಂ (56), ಡೆಬೊರಾ (11), ಜೂಡ್ ಎಮ್ಯಾನುಯೆಲ್ (10) ಹಾಗೂ ಹೆಪ್ಸಿಭಾ (8) ಎನ್ನಲಾಗಿದೆ.
ಈ ಸಂಬಂಧ ಜ್ಯೋತಿ ಮಣಿ ಅವರ ಪತಿ ಜಯರಾಜ್ ಶೇಖರ್ ಅವರು ದೂರು ದಾಖಲಿಸಿದ್ದಾರೆ.
ಜಯರಾಜ್ ಶೇಖರ್ ಅವರ ಪತ್ನಿ, ಮೂವರು ಮಕ್ಕಳು ಹಾಗೂ ಅತ್ತೆ ನಾಪತ್ತೆಯಾಗಿದ್ದು, ಅಲ್ಲದೇ, ಲಾಕರ್ನಲ್ಲಿರಿಸಿದ್ದ 1.40 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಕೂಡಾ ನಾಪತ್ತೆಯಾಗಿದೆ ಎಂದು ಜಯರಾಜ್ ಶೇಖರ್ ತಿಳಿಸಿದ್ದಾರೆ.
ಶೇಖರ್ ಅವರ ಪತ್ನಿ ತನ್ನ ಚಿನ್ನಾಭರಣಗಳನ್ನು ಪತಿಗೆ ತಿಳಿಯದೇ ಅಡವಿಟ್ಟಿದ್ದಾಳೆ. ಅಡವಿಟ್ಟ ಬಳಿಕ ಸಾಲ ಪಡೆದುಕೊಂಡಿದ್ದ ತನ್ನ ಸ್ನೇಹಿತೆಗೆ 1.80 ಲಕ್ಷ ರೂ.ಗಳನ್ನು ನೀಡಿದ್ದಾಳೆ. ಶೇಖರ್ಗೆ ಈ ವಿಷಯ ತಿಳಿದ ಬಳಿಕ, ಚಿನ್ನಾಭರಣವನ್ನು ತರುವಂತೆ ತನ್ನ ಹೆಂಡತಿಗೆ ಹೇಳಿದ್ದಾನೆ. ಇದಾದ ಬಳಿಕ ಐದು ಮಂದಿ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೈಜಿವಲ್ಡ್ ಜೊತೆ ಮಾತನಾಡಿದ ಪೊಲೀಸ್ ಅಧಿಕಾರಿಗಳು, "ಘಟನೆಯನ್ನು ದೃಢಪಡಿಸಿದ್ದು, ತನಿಖೆ ಪ್ರಗತಿಯಲ್ಲಿದೆ" ಎಂದು ತಿಳಿಸಿದ್ದಾರೆ.