ಮಂಗಳೂರು, ಮಾ.15 (DaijiworldNews/MB) : ''ಕುಂಪಲ ಭಾಗದಲ್ಲಿ ಪ್ರೇಕ್ಷಾಳಂತೆ ಮತ್ತೆ ಬೇರೆ ಯುವತಿಯರ ಬಾಳಲ್ಲಿ ಆಟವಾಡುವುದು, ಗಾಂಜಾ ವ್ಯಸನದ ಜೊತೆ ಕೈಜೋಡಿಸುವುದು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದನ್ನು ಕಂಡಲ್ಲಿ ಕುಂಪಲದ ಊರಿನವರು, ವಿವಿಧ ಸಂಘಟನೆಗಳು ಸೇರಿಕೊಂಡು ಘಟನೆಗೆ ಕಾರಣರಾದವರ ಮನೆಯನ್ನೇ ಉಳಿಸುವುದಿಲ್ಲ. ಊರಲ್ಲಿರದ ಹಾಗೆ ನೋಡಿಕೊಳ್ಳುತ್ತೇವೆ'' ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.














ಕುಂಪಲ ಪರಿಸರದಲ್ಲಿ ನಡೆಯುತ್ತಿರುವ ಗಾಂಜಾ ವ್ಯಸನದ ವಿರುದ್ಧ ಆಶ್ರಯಕಾಲನಿಯಿಂದ ಕುಂಪಲ ಶಾಲಾ ಮೈದಾನದವರೆಗೆ ಹಮ್ಮಿಕೊಂಡ ಮೌನ ಪ್ರತಿಭಟನೆ ಹಾಗೂ ಜಾಗೃತಿ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು.
''ಆಶ್ರಯಕಾಲನಿಯ ಯುವಕರು ಗೊತ್ತಿದ್ದೋ ಗೊತ್ತಿಲ್ಲದೆಯೋ ಗಾಂಜಾ ಚಟಕ್ಕೆ ಬಿದ್ದಿದ್ದಾರೆ. ಈ ಕೂಡಲೇ ಚಟದಿಂದ ದೂರ ಆಗುವ ಮುಖಾಂತರ ಮನೆಗಳನ್ನು ಬೆಳಗಿಸುವ ಕಾರ್ಯಕ್ಕೆ ಮುಂದಾಗಿರಿ. ಪ್ರೇಕ್ಷಾಳ ಸಾವಿನ ಬಳಿಕ ಆಗಿರುವ ಬೆಳವಣಿಗೆಯಿಂದಾಗಿ ಆಶ್ರಯಕಾಲನಿ ನಿವಾಸಿಗಳು ಮನೆಯಿಂದ ಹೊರಗೆ ಬರಲು ಹೆದರುವಂತಾಗಿದೆ. ಸಣ್ಣ ಕಾರ್ಯಕ್ರಮವಾದರೂ 200-300 ರಷ್ಟು ಜನ ಸೇರುವ ಪ್ರದೇಶದಲ್ಲಿ ಗಾಂಜಾ ವಿರುದ್ಧದ ಹೋರಾಟಕ್ಕೆ ಜನ ಸೇರದೇ ಇರುವುದು ಹೆದರಿಕೆಯೇ ಕಾರಣವಾಗಿದೆ. ಮೋಹನ್ ಶೆಟ್ಟಿ ಅವರ ಮನೆಗೆ ಕಲ್ಲೆಸೆದ ಪ್ರಕರಣದಲ್ಲಿ ಬಂಧಿತರಾದ 11 ಮಂದಿಯೂ ಗಾಂಜಾ ಪಾಸಿಟಿವ್ ಅನ್ನುವ ವೈದ್ಯಕೀಯ ವರದಿಯೂ ಪೊಲೀಸ್ ಇಲಾಖೆಯಲ್ಲಿದೆ. ಇಲ್ಲಿನ ಜನ ಗಾಂಜಾ ಮಾಫಿಯಾ ವಿರುದ್ಧ ಹೆದರುವ ಆವಶ್ಯಕತೆಯಿಲ್ಲ. ಹೆದರಿಕೊಂಡಲ್ಲಿ ಮಕ್ಕಳ ಭವಿಷ್ಯವನ್ನು ನಾವೇ ಹಾಳು ಮಾಡಿಕೊಂಡಂತೆ. ಯಾರ ಧಮ್ಕಿಗೂ ಹೆದರುವವರಲ್ಲ ಆಶ್ರಯ ಕಾಲನಿ ನಿವಾಸಿಗಳು ಅನ್ನುವುದನ್ನು ತೋರಿಸಿಕೊಡಬೇಕು. ಮಕ್ಕಳು ಕೆಟ್ಟ ಸಾಮಾಜಿಕ ವ್ಯವಸ್ಥೆಗೆ ಜಾರಿದಲ್ಲಿ ಕೆಟ್ಟ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದಂತೆ. ಪ್ರಮುಖವಾಗಿ ಈ ಭಾಗಕ್ಕೆ ಗಾಂಜಾ ತಂದು ಕೊಡುವವರು ಯಾರು? ಅನ್ನುವುದನ್ನು ಪೊಲೀಸರು ಪತ್ತೆಹಚ್ಚಬೇಕಿದೆ. ಪ್ರೇಕ್ಷಾ ಸಾವಿನ ನಂತರ ಪ್ರತೀ ಮನೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗಾಂಜಾ ಮೂಲವನ್ನು ಪೊಲೀಸರು ಪತ್ತೆಹಚ್ಚದೇ ಇದ್ದಲ್ಲಿ, ಜನರ ಆತಂಕವನ್ನು ದೂರ ಮಾಡಿಸಲು ಅಸಾಧ್ಯ. ಗಾಂಜಾ ಚಟದಲ್ಲಿ ಯಾವುದೇ ಪಕ್ಷದವರಾಗಲಿ, ಸಂಘಟನೆಯವರಾಗಲಿ ಬಿಡುವುದಿಲ್ಲ. ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವವರ ವಿರುದ್ಧ ಹೋರಾಟ ನಿರಂತರವಾಗಲಿದೆ. ಇಂದು ನಡೆದ ಜಾಗೃತಿ ಜಾಥಾ ಗಾಂಜಾ ವ್ಯಸನಿಗಳಿಗೆ ಕಟ್ಟ ಕಡೆಯ ಎಚ್ಚರಿಕೆ. ಮುಂದೆ ಇಂತಹ ದುಷ್ಕೃತ್ಯಗಳು ಮುಂದುವರಿದಲ್ಲಿ ಅಂತಹವರ ಮನೆಯನ್ನೇ ಇರಲು ಬಿಡದೆ, ಊರಿನಿಂದಲೇ ಓಡಿಸುತ್ತೇವೆ'' ಎಂದು ಎಚ್ಚರಿಸಿದರು.
ಜಾಗೃತಿ ಜಾಥಾದಲ್ಲಿ ದೇವಾನಂದ್ ಶೆಟ್ಟಿ, ಮೋಹನ್ ಶೆಟ್ಟಿ, ಕಿಶೋರ್ , ವತ್ಸಲಾ, ದೇವಕಿ, ಶಿವಾನಂದ ಟೈಲರ್, ಅಶ್ವಿತ್, ಗಂಗಾಧರ ಗಟ್ಟಿ, ಚೇತನ್, ಅಶೋಕ್ ,ಪ್ರಕಾಶ್ ಕುಂಪಲ, ಶಕ್ತಿಪ್ರಸಾದ್, ರಮೇಶ್ , ರವೀಂದ್ರ ಕುಂಪಲ, ವೆಂಕಟೇಶ್ ಕುಂಪಲ, ಅನಿಲ್ ಬಗಂಬಿಲ ಮುಂತಾದವರು ಉಪಸ್ಥಿತರಿದ್ದರು.