ತಿರುವನಂತಪುರಂ, ಆ.17: ಧಾರಕಾರ ಮಳೆಯಿಂದ ಕೇರಳ ತತ್ತರಿಸಿದ್ದು, ಭಾರೀ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 167ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ನಾನೇ ಬಂದು ಅಲ್ಲಿನ ಪರಿಸ್ಥಿತಿಗಳನ್ನು ಪರೀಶಿಲಿಸುವುದಾಗಿ ತಿಳಿಸಿದ್ದಾರೆ.
ಮಹಾಮಳೆಯಿಂದ ಕೇರಳ ದುರಂತ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈಗಾಗಲೇ ಮೃತಪಟ್ಟವರ ಸಂಖ್ಯೆ 167 ಕ್ಕೆ ಏರಿಕೆಯಾಗಿದೆ. ಪರಿಸ್ಥಿತಿಯನ್ನು ಸುಧಾರಿಸಲು ಭಾರತೀಯ ಕೋಸ್ಟ್ ಗಾರ್ಡ್ನ ನಾಲ್ಕು ಹಡಗುಗಳನ್ನು ಕೊಚ್ಚಿನ್ ಗೆ ಕಳುಹಿಸಲಾಗಿದ್ದು, ಈಗಾಗಲೇ ಪ್ರವಾಹ ಪೀಡಿತ ಹಳ್ಳಿಗಳಿಗೆ 24 ತಂಡಗಳು ಕಾರ್ಯಚರಣೆ ಮಾಡುತ್ತಿವೆ. ಐಸಿಜಿ 1,764 ಜನರನ್ನು ರಕ್ಷಿಸಿದ್ದು, 4,688 ಜನರಿಗೆ ಸುರಕ್ಷಿತ ಸ್ಥಳಕ್ಕೆ ತಲುಪಿಸಿದೆ.
ಮಹಾಮಳೆಯಿಂದ ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಭೂಕುಸಿತಗಳು ಸಂಭವಿಸುತ್ತಲೇ ಇವೆ. ಮಾತ್ರವಲ್ಲ, ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ಪಟ್ಟಣಂತಿಟ್ಟು ಜಿಲ್ಲೆಯ ರಾಣಿ, ಅರ್ನಮುಲಾ ಮತ್ತು ಕೊಳಂಚೇರಿಯಲ್ಲಿ ಜಲಾವೃತ ಮನೆಗಳಲ್ಲಿ ಸಿಕ್ಕಿಬಿದ್ದಿದ್ದ 20 ಮಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ರಸ್ತೆಗಳು, ಕಟ್ಟಡಗಳು ಜಲಾವೃತಗೊಂಡಿದ್ದು, ಕೇರಳದ ಜನ ಕಂಗಾಲಾಗಿದ್ದಾರೆ.
ಇಡುಕ್ಕಿ ಡ್ಯಾಂನಿಂದ ನೀರು ಬಿಟ್ಟಿರುವ ಪರಿಣಾಮ, ಚೆರಂತೋನಿ ಸಮೀಪ ರಸ್ತೆಗೆನೀರು ನುಗ್ಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ನೂರಾರು ವಾಹನಗಳು ನೀರಲ್ಲಿ ಮುಳುಗಿವೆ. ಯೋಧರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕೇಂದ್ರ ಮತ್ತು ದೇಶದ ಹಲವು ರಾಜ್ಯಗಳು ಕೇರಳಕ್ಕೆ ನೆರವಿನ ಹಸ್ತ ಚಾಚಿವೆ.
ಕೇರಳದ ಸ್ಥಿತಿ ಭಯಾನಕವಾಗಿದ್ದು, ರಾಜ್ಯದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕಾಸರಗೋಡು ಎರ್ನಾಕುಲಂ ಮತ್ತು ಇಡುಕ್ಕಿ ಸೇರಿದಂತೆ ಇತರ 13 ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇನ್ನೂ ಆರು ದಿನಗಳು ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.