ಕೊಡಗು, ಆ.17: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಧಾರಾಕಾರ ಮಳೆಯಾಗುತ್ತಿದೆ. ಎಲ್ಲೆಂದರಲ್ಲಿ ನುಗ್ಗಿ ಬರುತ್ತಿರುವ ನೀರು, ಮತ್ತೊಂದೆಡೆ ಕುಸಿಯುತ್ತಿರುವ ಗುಡ್ಡ ಮನೆಗಳು ಜನ ಜೀವನವನ್ನು ಅಪಾಯದತ್ತ ತಳ್ಳಿದೆ.
ಮಡಿಕೇರಿಯ ತಾಳ್ತ್ಮನೆ, ಕಡಗದಾಳು, ಬೋಯಿಕೇರಿ, ಕಾಟಕೇರಿ, ಗಾಳಿಬೀಡು ಸೇರಿದಂತೆ ವಿರಾಜಪೇಟೆ ತಾಲೂಕಿನ ಶ್ರೀಮಂಗಲ, ಬಿರುನಾಣಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕರೆ ಮಳೆ ಮುಂದುವರೆದಿದ್ದು, ಪ್ರವಾಹ ಪರಿಸ್ಥಿತಿ ಹೆಚ್ಚಾಗುತ್ತಿದೆ. ಮಹಾಮಳೆಯಿಂದ ಪಾದಚಾರಿಗಳು, ಆಟೋ ಚಾಲಕರು, ಬೈಕ್ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಾತ್ರವಲ್ಲ, ಕೊಡಗಿನಲ್ಲಿ ಸುರಿಯುತ್ತಿರುವ ಮಹಾಮಳೆಗೆ ಅನೇಕ ಕಡೆ ಬೆಟ್ಟಗಳು ಕುಸಿದು ಬೀಳುತ್ತಿದೆ. ಪರಿಣಾಮ ಸಾವಿರಾರು ಜನರು ತಮ್ಮ ಮನೆ - ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಮಕನೂರು ಪ್ರದೇಶದಲ್ಲಿರುವ ಕೊಡಗು - ಮಂಗಳೂರಿನ ಹೆದ್ದಾರಿಗಳು ಸಂಪೂರ್ಣವಾಗಿ ಬಂದ್ ಆಗಿದೆ.
ಬೆಟ್ಟ ಕುಸಿದ ಸ್ಥಳದಲ್ಲಿ ಮನೆಗಳು ಕಾಣಿಸುತ್ತಿದ್ದು. ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೆಟ್ಟ ಕುಸಿಯುತ್ತಲೇ ಇರುವುದರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ.
ಸೇನಾ ಪಡೆಯ ಮೂರು ರಕ್ಷಣಾ ತಂಡಗಳು ಕಾರ್ಯಾಚರಣೆಗೆ ಬರಲಿದ್ದು, ಪ್ರವಾಹ ಸ್ಥಿತಿಯಲ್ಲಿ ಇದ್ದವರನ್ನು ಮಾತ್ರ ರಕ್ಷಣೆ ಮಾಡಲಾಗುತ್ತಿದೆ. ಆಶ್ರಯ ಕಳೆದುಕೊಂಡವರ ಸಂಖ್ಯೆ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ.