ಕೊಡಗು, ಆ18: ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿದ್ದ ರೌದ್ರ ಮಳೆ ಮತ್ತೆ ತನ್ನ ಅಬ್ಬರ ಮುಂದುವರಿಸಿದೆ. ಪರಿಣಾಮ, ಜಿಲ್ಲೆಗೆ ಮುತ್ತಿಗೆ ಹಾಕಿದ ಪ್ರವಾಹ ಇನ್ನೂ ನಿಂತಿಲ್ಲ.
ಮಳೆಯ ಆರ್ಭಟದಿಂದಾಗಿ ಪ್ರವಾಹ ಉಲ್ಬಣಿಸಿದ್ದು, ಜಿಲ್ಲೆಯನ್ನು ಸಂರ್ಪಕಿಸುವ ಎಲ್ಲ ರಸ್ತೆಗಳೂ ಬಂದ್ ಆಗಿವೆ. ಮಳೆ ತಂದಿಟ್ಟ ಅವಾಂತರಕ್ಕೆ ಕೊಡಗಿನಲ್ಲಿ ಈವರೆಗೆ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮಾತ್ರವಲ್ಲ ಹಲವರು ಕಣ್ಮರೆಯಾಗಿದ್ದಾರೆ. ನಾಪತ್ತೆಯಾದವರ ದೇಹ ಇನ್ನೂ ಸಿಕ್ಕಿಲ್ಲ. ಮಾಹಿತಿಯೂ ಲಭ್ಯವಾಗಿಲ್ಲ.
ವರುಣನ ರುದ್ರ ನರ್ತನಕ್ಕೆ ಹಲವು ಮನೆಗಳು ಕುಸಿದು ಬಿದ್ದಿವೆ. ವಿದ್ಯುತ್ ಕಂಬಗಳು ಕುಸಿದು ಬಿದ್ದಿದೆ. ಪರಿಣಾಮ, ಜಿಲ್ಲೆಯಲ್ಲಿ ವಿದ್ಯುತ್ ಕಡಿತವಾಗಿದೆ. ಹೀಗಾಗಿ ಕೊಡಗಿನಲ್ಲಿ ಭಾಗಶಃ ಕತ್ತಲೆ ಕವಿದಿದೆ. ಮಾತ್ರವಲ್ಲ, ಮೊಬೈಲ್ ರೀಚಾರ್ಜ್ ಕೂಡ ಆಗದೇ ಸಂಪರ್ಕ ಕಡಿತವಾಗುತ್ತಿದೆ.
ತೀವ್ರ ತೇವಾಂಶದಿಂದಾಗಿ ಗುಡ್ಡಗಳು ಕುಸಿದು ಮನೆಗಳು ನೆಲಕ್ಕುರುಳಿದರೆ, ಹಳ್ಳಿ, ಪಟ್ಟಣಗಳನ್ನು ಸಂರ್ಪಸುವ ರಸ್ತೆಗಳೂ ಸಂಪರ್ಕ ಕಡಿದುಕೊಂಡು 500ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಸಿದ ಒಂದು ಗುಡ್ಡವನ್ನು ತೆರವು ಮಾಡುತ್ತಿರುವಾಗಲೇ ಮತ್ತೆಲ್ಲೋ ಮತ್ತೊಂದು ಗುಡ್ಡ ಜಾರಿಕೊಂಡು ಬೀಳುತ್ತಿದೆ. ಭಾಗಮಂಡಲದಲ್ಲಿ ಕಾವೇರಿ ಪ್ರವಾಹ ಪರಿಸ್ಥಿತಿ 4 ದಿನಗಳಿಂದ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಮಡಿಕೇರಿ- ವಿರಾಜಪೇಟೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ರಾಜ್ಯ ಹೆದ್ದಾರಿ 89ರಲ್ಲಿನ ಪೊಕಳತೋಡಿನಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸೋಮವಾರಪೇಟೆ ತಾಲೂಕಿನ ಇಗ್ಗೋಡ್ಲು ಗ್ರಾಮದಲ್ಲಿ ಪಾರೇಕರೆ ಗುಡ್ಡ ಕುಸಿದಿದ್ದು, ಸ್ಥಳೀಯರು ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ಗ್ರಾಮದಲ್ಲಿ ಗುಡ್ಡ ಕುಸಿತದಿಂದ 30 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾವೇರಿ ಪ್ರವಾಹದಿಂದಾಗಿ ಪಿರಿಯಾಪಟ್ಟಣ ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿವೆ. ದಕ್ಷಿಣ ಕಾಶಿ ನಂಜನಗೂಡು ಮತ್ತೊಮ್ಮೆ ಕಬಿನಿ ಪ್ರವಾಹಕ್ಕೆ ಸಿಲುಕಿ ಶ್ರೀ ಕಂಠೇಶ್ವರಸ್ವಾಮಿ ದೇಗುಲದ ಸಮೀಪಕ್ಕೆ ನೀರು ಬಂದಿದೆ. ಮೈಸೂರು-ನಂಜನಗೂಡು ಹೆದ್ದಾರಿ ಮತ್ತೊಮ್ಮೆ ಕಡಿತಗೊಂಡಿದೆ. ಹಾಸನ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ 150ಕ್ಕೂ ಹೆಚ್ಚು ಮನೆಗಳು, ಐತಿಹಾಸಿಕ ದೇಗುಲಗಳು ಮುಳುಗಡೆಯಾಗಿ ಹಲವು ಮನೆಗಳು ನೆಲಸಮಗೊಂಡಿವೆ.
ಪ್ರಸಕ್ತ ಮುಂಗಾರಿನಲ್ಲಿ ಕೊಡಗು ಜಿಲ್ಲೆಯಲ್ಲೇ ಅತ್ಯಧಿಕ ಮಳೆಯಾಗಿದೆ. ಜೂ.1ರಿಂದ ಆ.16ರವರೆಗೆ ಜಿಲ್ಲೆಯಲ್ಲಿ 2,848 ಮಿ.ಮೀ. ಮಳೆಯಾಗಿದ್ದು, ಶೇ.62 ಅಧಿಕ ಮಳೆಯಾಗಿದೆ. ಈ ನಡುವೆ ಕೊಡಗು ಜಿಲ್ಲೆಯಲ್ಲಿ 17 ನೆರೆ ಪರಿಹಾರ ಕೇಂದ್ರ ಸ್ಥಾಪಿಸಿ, 573 ಜನರಿಗೆ ರಕ್ಷಣೆ ನೀಡಲಾಗುತ್ತಿದೆ.