ಮಂಗಳೂರು, ಆ.18: ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆ ಕ್ಷಣ ಕ್ಷಣಕ್ಕೂ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದ್ದು, ದಿನದಿಂದ ದಿನಕ್ಕೆ ಕೇರಳದ ಪರಿಸ್ಥಿತಿ ಹದಗೆಡುತ್ತಿದೆ. ಈ ನಡುವೆ ಮಂಗಳೂರಿನಿಂದ ಕೇರಳದ ಪ್ರಾರ್ಥನಾ ಮಂದಿರ ಮತ್ತು ಪ್ರವಾಸಕ್ಕೆಂದು ತೆರಳಿದ್ದ 200ಕ್ಕೂ ಅಧಿಕ ಮಂದಿಯ ಸಂಪರ್ಕ ಕಡಿತಗೊಂಡಿದೆ.
ಮಂಗಳೂರು ಹೊರವಲಯದ ಮುಡಿಪುವಿನ 8 ಮಂದಿ ಪ್ರವಾಸಕ್ಕೆ ತೆರಳಿದ್ದು, ಗುರುವಾರದವರೆಗೆ ಮನೆ ಮಂದಿಯ ಸಂಪರ್ಕದಲ್ಲಿದ್ದರು. ಆದರೆ, ಶುಕ್ರವಾರದಿಂದ ಯಾವುದೇ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕೇರಳ ಸುತ್ತಮುತ್ತ ಪ್ರವಾಸಕ್ಕೆ ತೆರಳಿದ ತಂಡ ಮಾಜಿ ಶಾಸಕ ಜೆ.ಆರ್. ಲೋಬೋ ಅವರಿಗೆ ಮೊಬೈಲ್ ಕರೆ ಮಾಡಿದ್ದಾರೆ. ಮಂಗಳೂರಿನ 200 ಮಂದಿ ಸೇರಿದಂತೆ, ಗೋವಾ, ಮಹಾರಾಷ್ಟ್ರದ 1200ಕ್ಕೂ ಅಧಿಕ ಮಂದಿ ಒಂದೇ ಕಟ್ಟಡದಲ್ಲಿ ಇರುವ ಬಗ್ಗೆ ಲೋಬೋ ಅವರಿಗೆ ಮಾಹಿತಿ ನೀಡಿದ್ದಾರೆ.
ಕೇರಳದ ಡಿವೈನ್ ರಿಟ್ರೀಟ್ ಸೆಂಟರ್ಗೆ ಪ್ರಾರ್ಥನೆಗೆಂದು ಮೂಡುಬಿದಿರೆ, ಕಾರ್ಕಳ, ಮುಡಿಪು, ಮಂಗಳೂರು ಸೇರಿದಂತೆ ನಾನಾ ಕಡೆಯಿಂದ 200ಕ್ಕೂ ಅಧಿಕ ಮಂದಿ ಪ್ರವಾಸಕ್ಕೆ ತೆರಳಿದ್ದರು. ಇದೀಗ ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ, ನೆರೆಗೆ ಸಿಲುಕಿ ಕುಟುಂಬ ವರ್ಗದ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ.
ಸಂತ್ರಸ್ತರ ರಕ್ಷಣೆಗೆ ಭಾರತೀಯ ಸೇನೆ, ವಾಯುದಳ ಮತ್ತು ನೌಕಾದಳಗಳ ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸುತ್ತಿದ್ದರೂ, ಸಾವಿನ ಸಂಖ್ಯೆ ಮಾತ್ರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.