ಮಂಗಳೂರು, ಆ.18: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಜನತೆ ಹೈರಾಣಾಗಿದ್ದು, ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ನಡುವೆತೀವ್ರ ಮಳೆ ಮತ್ತು ಭೂ ಕುಸಿತದಿಂದಾಗಿ ಬೆಂಗಳೂರು - ಮಂಗಳೂರು ನಡುವೆ ರೈಲು ಹಳಿ ಸಂಪರ್ಕ ಕಡಿತಗೊಂಡಿದ್ದು, ತಿಂಗಳುಗಳ ಕಾಲ ರೈಲು ಸಂಚಾರ ಅನುಮಾನ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಸಕಲೇಶಪುರ ತಾಲೂಕು ಸೇರಿದಂತೆ ಸುಮಾರು 50 ಕಡೆಗಳಲ್ಲಿ ರೈಲು ಹಳಿ ಸಂಪರ್ಕ ಕಡಿತಗೊಂಡಿದೆ. ಸಕಲೇಶಪುರ ತಾಲೂಕಿನ ಎಡಕುಮೇರಿ ರೈಲು ಹಳಿಯ ಮೇಲೆ ಗುಡ್ಡ ಕುಸಿದಿದೆ. ಪರಿಣಾಮ, ಬೆಂಗಳೂರು ಮಂಗಳೂರು ರೈಲ್ವೇ ಸಂಪರ್ಕ ಕಡಿತಗೊಂಡಿದೆ. ಇನ್ನು ಒಂದು ತಿಂಗಳು ರೈಲು ಸಂಚಾರ ಅನುಮಾನ ಎಂದು ಮೂಲಗಳು ತಿಳಿಸಿದೆ.
ಸಕಲೇಶಪುರ ತಾಲೂಕು ಎಡಕುಮರಿ ಸುತ್ತಲೂ ರೈಲ್ವೇ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ತೆರವು ಕಾರ್ಯಾಚರಣೆಗೆ ಕಾರ್ಮಿಕರ ಕೊರತೆಯಿಂದ ಕಾರ್ಯ ವಿಳಂಬವಾಗುತ್ತಿದೆ. ಮಾತ್ರವಲ್ಲ, ಮಹಾ ಮಳೆಯಿಂದಾಗಿ ರೈಲ್ವೇ ಇಲಾಖೆಗೆ ಅಪಾರ ನಷ್ಟ ಉಂಟಾಗಿದೆ.
ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಕ್ರಮೇಣ ಆರಂಭವಾಗಿದ್ದು, ಶನಿವಾರ ಬೆಂಗಳೂರಿನಿಂದ ಮಂಗಳೂರಿಗೆ ಕೆಎಸ್ಆರ್ಟಿಸಿ ಬಸ್ ಸಚಾರ ಆರಂಭಿಸಿದೆ.