ಮಂಗಳೂರು, ಆ.18: ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಗೋ ಕಳ್ಳತನ, ಗೋಹತ್ಯೆ, ಅಕ್ರಮ ಗೋ ಸಾಗಾಟ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಆಗ್ರಹ ಮಾಡಿದ್ದಾರೆ.
ವಿ.ಎಚ್.ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುರ್ಬಾನಿ ಹೆಸರಲ್ಲಿ ಅಕ್ರಮ ಗೋ ಸಾಗಟ ಮತ್ತು ಗೋಹತ್ಯೆ ಹೆಚ್ಚಾಗಿ ನಡೆಯುತ್ತಿದೆ. ಅಮಾನುಷ ರೀತಿಯಲ್ಲಿ ಗೋವನ್ನು ಬಲಿ ಕೊಡಲಾಗುತ್ತಿದೆ. ಕಷ್ಟ-ನಷ್ಟದಲ್ಲೂ ಇಷ್ಟಪಟ್ಟು ಸಾಕಿ ಸಲಹಿದ ದನಗಳನ್ನು ತಲವಾರಿನಂತಹ ಮಾರಕಾಯುಧಗಳಿಂದ ಹೆದರಿಸಿ ಅಕ್ರಮ ಗೋ ಸಾಗಾಟ ಮಾಡಲಾಗುತ್ತಿರುವುದು ಖಂಡನೀಯ ಎಂದು ಹೇಳಿದರು.
ಗೋವುಗಳನ್ನು ಕುರ್ಬಾನಿ ಮಾಡುವುದಾದರೆ ನಾವು ಅದನ್ನು ನಿಲ್ಲಿಸುತ್ತೇವೆ. ಕರಾವಳಿ ಸೇರಿದಂತೆ ಹಲವೆಡೆ ನಿರಂತರವಾಗಿ ಗೋವುಗಳ ಸಾಗಾಟ ಮತ್ತು ಹತ್ಯೆ ನಡೆಯುತ್ತಿದ್ದು, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮ ಗೋವುಗಳ ಸಾಗಾಣಿಕೆ ಮತ್ತು ವಧೆ ಜಾಸ್ತಿ ಆಗುವ ಸಂಭವವಿದೆ. ಈ ಅಕ್ರಮ ಗೋವು ಸಾಗಾಟದ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿ. ಅಕ್ರಮ ಗೋಹತ್ಯೆ ವಿಚಾರಗಳು ಜಿಲ್ಲೆಯಲ್ಲಿ ಸಂಘರ್ಷಕ್ಕೆ ಎಡೆ ಮಾಡಿ ಕೊಡುವುದು ಬೇಡ. ಇದರ ವಿರುದ್ಧ ಸೂಕ್ತ ಕ್ರಮ ಜಾರಿಯಾಗಲಿ ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಅಕ್ರಮ ಗೋಸಾಗಟ, ಗೋಹತ್ಯೆ ನೀಷೇಧಿಸದಿದ್ದರೆ, ನಾವೇ ನಿಲ್ಲಿಸುತ್ತೇವೆ. ನಮ್ಮ ಹೋರಾಟ ಗೋಕಳ್ಳರ ವಿರುದ್ಧ ಹೊರತು ಯಾವುದೇ ಸಮುದಾಯದ ಮೇಲೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.