ಸುಳ್ಯ, ಆ 18: ಜೋಡುಪಾಲದಲ್ಲಿ ಗುಡ್ಡಗಳು ಜರಿದು ಉಂಟಾಗಿರುವ ಭಾರೀ ಪ್ರಕೃತಿ ದುರಂತದಿಂದ ಸಂತ್ರಸ್ತರಾಗಿ ಸಿಲುಕಿಕೊಂಡಿರುವ ಜನರ ರಕ್ಷಣಾ ಕಾರ್ಯ ಮುಂದುವರಿದಿದೆ. ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಸಂಪಾಜೆ ಸಮೀಪದ ಅರೆಕಲ್ಲು ಜೋಡುಪಾಲ ಮತ್ತು ಮದೆನಾಡು ಪ್ರದೇಶಗಳಲ್ಲಿ ಎತ್ತರದ ಗುಡ್ಡಗಳು ಬಿರುಕು ಬಿಡುತ್ತಿದ್ದು ಜನತೆ ಆತಂಕದಲ್ಲಿದ್ದಾರೆ.
ಶುಕ್ರವಾರ ರಾತ್ರಿ ಭಾರೀ ಮಳೆ ಮತ್ತು ಕತ್ತಲಿನ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಶನಿವಾರ ಬೆಳಗ್ಗಿನಿಂದಲೇ ಮತ್ತೆ ಮುಂದುವರಿಯಿತು. ರಾಷ್ಟ್ರೀಯ ವಿಪತ್ತು ದಳ, ಅಗ್ನಿಶಾಮಕ ದಳ, ಸುಳ್ಯ ಪೊಲೀಸರು ಮತ್ತು ಊರವರು ಮತ್ತು ಸುಳ್ಯ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಜನ ಸೇರಿ ಅಪಾಯದಲ್ಲಿ ಸಿಲುಕಿದ ಮಂದಿಯನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದರು. ರಭಸವಾಗಿ ಹರಿಯುವ ನೀರು ಮತ್ತು ಕಿಲೋಮೀಟರ್ ಗಟ್ಟಲೆ ತುಂಬಿರುವ ಕೆಸರಿನ ಮಧ್ಯೆ ರಕ್ಷಣಾ ಕಾರ್ಯ ಹರಸಾಹಸವಾಗಿದ್ದು, ರೋಪ್ ಮೂಲಕ ಜನರನ್ನು ರಕ್ಷಿಸಲಾಗುತ್ತಿದೆ. ಪರಿಸರದ ಕೂಟೇಲು, ಅರೆಕಲ್ಲು ಮೊದಲಾದ ಪ್ರದೇಶಗಳಿಂದಲೂ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.
ರಕ್ಷಣೆಗೆ ಧಾವಿಸಿದ ಸಂಘ ಸಂಸ್ಥೆಗಳು :
ಜೋಡುಪಾಲದಲ್ಲಿ ನಡೆದ ಪ್ರಕೃತಿ ದುರಂತಕ್ಕೆ ಹಲವು ಸಂಘಸಂಸ್ಥೆಗಳು ಸಹಾಯಹಸ್ತ ಚಾಚಿದೆ. ರಾಷ್ಟ್ರೀಯ ವಿಪತ್ತು ದಳ, ಅಗ್ನಿಶಾಮಕ ದಳ, ಸುಳ್ಯ ಪೊಲೀಸರೊಂದಿಗೆ ಸುಳ್ಯದ ಸಂಘಸಂಸ್ಥೆಗಳು, ಆರ್ಎಸ್ಎಸ್ ಸಂಘಟನೆ ಯುವಕರು ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದಾರೆ.
ಭಾರೀ ಗುಡ್ಡ ಕುಸಿತದಿಂದ ಸಂತ್ರಸ್ತರಾಗಿರುವ ನೂರಾರು ಮಂದಿಯನ್ನು ವಿವಿಧ ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಅರಂತೋಡು ತೆಕ್ಕಿಲ್ ಹಾಲ್ನಲ್ಲಿ ಸುಮಾರು ೧೨೦ ಮಂದಿ , ಕಲ್ಲುಗುಂಡಿ ಶಾಲೆಯಲ್ಲಿ ಸುಮಾರು ೬೪ ಮತ್ತು ಕೊಡಗು ಸಂಪಾಜೆ ಶಾಲೆಯಲ್ಲಿ ಸುಮಾರು ೧೭೦ ಮಂದಿ ಇದ್ದಾರೆ. ನಿರಾಶ್ರಿತರಿಗೆ ಊರವರು ಆಹಾರ ಪೂರೈಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತಿದೆ.
ಸಚಿವ ಖಾದರ್, ಸಂಸದ ಕಟೀಲ್ ಭೇಟಿ:
ನಿರಾಶ್ರಿತ ಶಿಬಿರಗಳಿಗೆ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್, ತಹಶೀಲ್ದಾರ್ ಕುಂಞಿಮ್ಮ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.